ಗೋಣಿಕೊಪ್ಪಲು, ಅ. 1: ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿಯ ನೇತೃತ್ವದಲ್ಲಿ ನಡೆದು ಬರುತ್ತಿರುವ ಸ್ತಬ್ಧ ಚಿತ್ರ ಮೆರವಣಿಗೆ ವರ್ಷದಿಂದ ವರ್ಷಕ್ಕೆ ಸಂಖ್ಯೆಯಲ್ಲಿ ಕುಸಿದು ದಸರಾ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈ ಹಿಂದೆ ಸುಮಾರು 33 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡ ಉದಾಹರಣೆಗಳಿದ್ದವು. ಈ ಭಾರೀ ಶೋಚನೀಯವಾಗಿ ಕೇವಲ 8ಕ್ಕೆ ಕುಸಿದಿದೆ.
ನಾಡಹಬ್ಬ ಸಮಿತಿ ತನ್ನ ಬೆಳ್ಳಿ ಹಬ್ಬವನ್ನು ಪೆÇನ್ನಿಮಾಡ ಸುರೇಶ್ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿತ್ತು. ನಂತರ ಮೂರು ವರ್ಷದಿಂದ ರಿಷಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಾಡಹಬ್ಬ ದಸರಾ ಆಚರಣೆ ಮುಂದುವರಿದಿದೆ. ಈ ಬಾರಿ ರಿಷಿ ಕಾವೇರಪ್ಪ ಹಾಗೂ ಕಾರ್ಯದರ್ಶಿ ಪ್ರವೀಣ್ ಅವರ ಪ್ರಯತ್ನದಿಂದಾಗಿ ಸ್ತಬ್ಧಚಿತ್ರ ಮೆರವಣಿಗೆ ನಡೆದರೂ ನಾಡಹಬ್ಬದೊಂದಿಗೆ ಗುರುತಿಸಿಕೊಂಡಿದ್ದ ಹಲವು ಪದಾಧಿಕಾರಿಗಳೂ ನಾಪತ್ತೆ ಯಾಗಿದ್ದಾರೆ.
ಇರುವ 8 ಸ್ತಬ್ಧ ಚಿತ್ರಮೆರವಣಿಗೆ 3 ಗಂಟೆ ಸುಮಾರಿಗೆ ಇಲ್ಲಿನ ಎಪಿಎಂಸಿ ಮುಂಭಾಗದಿಂದ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಉದ್ಘಾಟನೆಯೊಂದಿಗೆ ಚಾಲನೆಗೊಂಡಿತು. ಈ ಬಾರಿ ಸ್ತಬ್ಧಚಿತ್ರ ಮೆರವಣಿಗೆ ಸಂದರ್ಭ ವರುಣ ಬಿಡುವು ನೀಡಿತ್ತು.
ರಸ್ತೆಯ ಇಕ್ಕೆಲಗಳಲ್ಲೂ ನಿಂತು ನೋಡುವ ದಸರಾ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಕುಸಿದಿತ್ತು. ಭಾರತೀಯ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಸರ್ವಂ ತಂಡದ ಸ್ತಬ್ಧಚಿತ್ರ ಪ್ರಥಮ, ಭಗತ್ ಪುರುಷರ ಸ್ವಸಹಾಯ ಸಂಘದ ಬ್ಲೂವೇಲ್ ಕ್ರೀಡೆಯ ಕುರಿತಾದ ‘ಆರದಿರಲಿ ಮನೆಯ ನಂದಾದೀಪ’ ಚಿತ್ರಣ ದ್ವಿತೀಯ ಬಹುಮಾನ ಗೆದ್ದುಕೊಂಡಿತು.
ಅರುವತ್ತೊಕ್ಕಲು ಶಾರದಾಂಭ ದಸರಾ ಸಮಿತಿಯ ಘನ ತ್ಯಾಜ್ಯ ಕಸವಿಲೇವಾರಿ, ಪರಿಸರ ಸ್ವಚ್ಛತೆಯನ್ನು, ಮಾರಕ ರೋಗ ಇತ್ಯಾದಿ ಬಿಂಬಿಸುವ ಸ್ತಬ್ಧ ಚಿತ್ರ ತೃತೀಯ ಬಹುಮಾನ ಗೆದ್ದುಕೊಂಡಿತು.
ಕೊಡಗಿನಲ್ಲಿ ನಡೆಯುವ, ದೇಶವಿದೇಶಗಳಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ, ಸಾಮಾಜಿಕ ಕಳಕಳಿಯನ್ನು ಇಲ್ಲಿನ ಸ್ತಬ್ಧಚಿತ್ರಗಳು ಬಹುತೇಕ ಅಳವಡಿಸಿಕೊಳ್ಳುತ್ತಿದ್ದು, ಬಾಳೆಲೆಯಲ್ಲಿ ಬೆಳೆಗಾರನೋರ್ವ ನಾಯಿಯ ಗೂಡಿನೊಳಗೆ ಸಾಲಗಾರನನ್ನು ಬಿಟ್ಟು ಕಚ್ಚಿಸಿದ ಕೃತ್ಯದ ಸ್ತಬ್ಧಚಿತ್ರ ಗಮನಸೆಳೆಯುವಂತಿತ್ತು. ಇಲ್ಲಿನ ಎಪಿಎಂಸಿ ಯಾರ್ಡ್ನಲ್ಲಿ ನಡೆದ ವಿಯಟ್ನಾಂ ಕಾಳುಮೆಣಸು ಹಗರಣ, ಸಾಲುಮರದ ತಿಮ್ಮಕ್ಕ, ದೇಶಿ ಆಹಾರ ಸೇವಿಸುವ ಅಗತ್ಯತೆ, ಮೊಬೈಲ್ ಸೆಲ್ಫಿಗಳಿಂದ ಆಗುವ ಅನಾಹುತಗಳ ಕುರಿತಾದ ಸ್ತಬ್ಧಚಿತ್ರವನ್ನು ಇಂಡಿಯನ್ ಯುವಕ ಸಂಘ, ಗೆಳೆಯರ ಬಳಗ, ಹಿಂದೂಸ್ತಾನ್ ಇಂಡಸ್ಟ್ರೀಸ್ ಮುಂತಾದ ತಂಡಗಳು ದಸರಾ ಪ್ರಿಯರ ಕಣ್ತಣಿಸಲು ಪ್ರಯತ್ನ ಪಟ್ಟವು.
ಇಲ್ಲಿನ ನಾಡಹಬ್ಬ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಅಧ್ಯಕ್ಷ ರಿಷಿ ಕಾವೇರಪ್ಪ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನ ರೂ.20 ಸಾವಿರ ನಗದು-ಟ್ರೋಫಿ, ದ್ವಿತೀಯ ರೂ.15 ಸಾವಿರ ನಗದು-ಟ್ರೋಫಿ ಹಾಗೂ ತೃತೀಯ ಬಹುಮಾನ ರೂ.10 ಸಾವಿರ ನಗದು_ ಟ್ರೋಫಿಯೊಂದಿಗೆ ಅಟ್ಲಾಸ್ ಗೋಲ್ಡ್ ಅಂಡ್ ಡೈಮೆಂಡ್ ಮಾಲೀಕರು ಪರ್ಯಾಯ ಪಾರಿತೋಷಕವನ್ನು ವಿಜೇತರಿಗೆ ನೀಡಿದರು. ಸಂಘದ ಗೌರವ ಕಾರ್ಯದರ್ಶಿ ಕೊಲ್ಲೀರ ಗೋಪಿ ಚಿಣ್ಣಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಇದ್ದರು. - ಟಿ.ಎಲ್.ಎಸ್.