ಕುಶಾಲನಗರ, ಸೆ. 29: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯೋನ್ಮುಖ ರಾಗಬೇಕಾಗಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು.

ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ 2017-18ನೇ ಸಾಲಿನ ನೂತನ ಆಡಳಿತ ಮಂಡಳಿ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಆಮಿಷಗಳಿಗೆ ಬಲಿಯಾಗು ವದರೊಂದಿಗೆ ಪತ್ರಕರ್ತರು ಹಾದಿ ತಪ್ಪುವ ಕೆಲಸವಾಗ ಬಾರದು. ಸಮಚಿತ್ತ ದಿಂದ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಸಮಸ್ಯೆಗಳ ಕೈಗನ್ನಡಿಯಾಗಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಶಿಕ್ಷಕರಾದ ಎಂ.ಹೆಚ್.ನಜೀರ್ ಅಹಮ್ಮದ್ ಮಾತನಾಡಿ, ಪತ್ರಕರ್ತರಿಗೆ ತಾಳ್ಮೆ, ಶಿಸ್ತು, ಸಂಯಮ ಅಗತ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಂಜುನಾಥ್ ಮಾತನಾಡಿ, ಪ್ರಸ್ತುತ ಮಾಧ್ಯಮಗಳು ಹಲವು ರೀತಿಯ ಟೀಕೆ, ಆರೋಪಗಳಿಗೆ ಗುರಿಯಾಗುತ್ತಲೇ ಬರುತ್ತಿರುವದು ವಿಷಾದನೀಯ ಎಂದ ಅವರು, ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ತಮ್ಮ ವೃತ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ.ರಘು, ಕರಾವಿಪ ಜಿಲ್ಲಾ ಸಂಚಾಲಕರಾದ ಟಿ.ಜಿ.ಪ್ರೇಮ್‍ಕುಮಾರ್ ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿಲ್ ಪೊನ್ನೇಟಿ ನಿರೂಪಿಸಿದರು, ಕೆ.ಕೆ.ನಾಗರಾಜಶೆಟ್ಟಿ ಸ್ವಾಗತಿಸಿ ರಘು ಹೆಬ್ಬಾಲೆ ವಂದಿಸಿದರು.

ನೂತನ ಸಾಲಿನ ಅಧ್ಯಕ್ಷರಾಗಿ ಭೋಜಣ್ಣರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ರಘು ಹೆಬ್ಬಾಲೆ, ಉಪಾಧ್ಯಕ್ಷರಾಗಿ ಕೆ.ಕೆ.ನಾಗರಾಜಶೆಟ್ಟಿ, ಗೌರವಾಧ್ಯಕ್ಷರಾಗಿ ಎಂ.ಎನ್. ಚಂದ್ರಮೋಹನ್, ಖಜಾಂಚಿಯಾಗಿ ಪಿ.ಬಿ.ಸುನಿಲ್, ಸಹ ಕಾರ್ಯದರ್ಶಿ ಯಾಗಿ ಜಗದೀಶ್, ಸಹ ಖಜಾಂಚಿ ಯಾಗಿ ವಿನೋದ್, ಕಾರ್ಯಕ್ರಮ ಸಂಘಟಕರಾಗಿ ಕೆ.ಎಸ್.ಮೂರ್ತಿ, ನಿರ್ದೇಶಕರುಗಳಾಗಿ ವನಿತಾ ಚಂದ್ರಮೋಹನ್, ಕುಡೆಕಲ್ಲು ಗಣೇಶ್, ಅಶ್ವಥ್, ಮಹೇಶ್, ಹರ್ಷ, ನೀಲಾ ಅಧಿಕಾರ ಸ್ವೀಕರಿಸಿದರು.