ಮಡಿಕೇರಿ, ಸೆ. 29: ಶಾಂತಿಪ್ರಿಯ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಿಚಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರಾಗಿ, ವ್ಯಾಪಾರಿಗಳಾಗಿ ಮತ್ತು ಪ್ರವಾಸಿಗರಾಗಿ ಆಗಮಿಸುವ ಅನೇಕರು ಇಲ್ಲೇ ನೆಲೆಯೂರುತ್ತಿರುವ ಬೆಳವಣಿಗೆಗಳು ಕಂಡು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬಾಂಗ್ಲಾ, ಅಸ್ಸಾಂ, ಇನ್ನಿತರ ಪ್ರದೇಶಗಳಿಂದ ಆಗಮಿಸಿರುವ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರಿಗೆ ಗುರುತಿನ ಚೀಟಿ ಸೇರಿದಂತೆ ಯಾವದೇ ಸರಕಾರಿ ದಾಖಲಾತಿ ಇಲ್ಲದಿದ್ದರೂ ಜಿಲ್ಲೆಯಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ವ್ಯಾಪಾರಕ್ಕೆಂದು ಇತರ ರಾಜ್ಯಗಳಿಂದ ಬಂದವರು ಕೂಡ ಇಲ್ಲೇ ನೆಲೆ ಕಾಣುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಹೊರ ರಾಜ್ಯ, ಹೊರ ರಾಷ್ಟ್ರಗಳಿಂದ ಸೂಕ್ಷ್ಮ ಪ್ರದೇಶವಾಗಿರುವ ಕೊಡಗು ಜಿಲ್ಲೆಗೆ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಗ್ರಾಮ, ಪಟ್ಟಣ, ನಗರ ಭಾಗಗಳ ಯುವಕರು ಸಂಜೆಯಾಗುತ್ತಿದ್ದಂತೆ ಮಾದಕ ವ್ಯಸನಕ್ಕೆ ಮಾರು ಹೋಗುತ್ತಿರುವದು ಯುವ ಒಕ್ಕೂಟದ ಗಮನಕ್ಕೆ ಬಂದಿದೆ. ಪೊಲೀಸ್ ಇಲಾಖೆಯಿಂದ ಗಸ್ತು ಬಗ್ಗೆ ಪಟ್ಟಣ ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಸ್ಥಳೀಯರ ಸಹಕಾರದಲ್ಲಿ ಸಭೆ ನಡೆಸಿರುವದನ್ನು ಯುವ ಒಕ್ಕೂಟ ಶ್ಲಾಘಿಸುತ್ತದೆ. ಆದರೆ ಈ ವ್ಯವಸ್ಥೆ ಸಂಜೆ 6 ಗಂಟೆಯ ನಂತರವೂ ಆಗಬೇಕಾಗಿದೆ. ಪ್ರತಿ ಬಡಾವಣೆಗಳಿಗೆ ಪೊಲೀಸ್ ಇಲಾಖೆಯ ವಾಹನಗಳು ಸಂಚರಿಸುವಂತೆ ನೋಡಿಕೊಂಡಾಗ ಸಾಮಾಜ ಘಾತುಕ ಶಕ್ತಿಗಳು ನಿಯಂತ್ರಣಕ್ಕೆ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೋಂಸ್ಟೆ, ಲಾಡ್ಜ್‍ಗಳಲ್ಲಿ ಪ್ರವಾಸಿಗರ ಹಾಗೂ ಅಪರಿಚಿತರ ದಾಖಲಾತಿ ಪರಿಶೀಲನೆ ಖಡ್ಡಾಯಗೊಳಿಸಬೇಕಾಗಿದ್ದು, ಶಾಂತಿಪ್ರಿಯ ಕೊಡಗು ಜಿಲ್ಲೆಯಲ್ಲಿ ಎಲ್ಲರೂ ಜಾತಿ, ಮತ, ಭೇದ ಮರೆತು, ಪರಸ್ಪರ ಸ್ಪಂದಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಗೆ ಬರುವ ಪ್ರತಿಯೊಬ್ಬ ಅತಿಥಿಯನ್ನೂ ಪ್ರೀತಿಯಿಂದ ಸತ್ಕರಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಸಮಾಜ ಘಾತುಕ ಶಕ್ತಿಗಳಿಂದ ಮುಂದಿನ ದಿನಗಳಲ್ಲಿ ಅಶಾಂತಿ ಮೂಡುವ ಸಾಧ್ಯತೆಗಳಿದೆ ಎಂದು ಜೋಯಪ್ಪ ಅಭಿಪ್ರಾಯಪಟ್ಟಿದ್ದಾರೆ.