ಮಡಿಕೇರಿ, ಸೆ. 29: ನವರಾತ್ರಿಯ ಮಹಾನವಮಿ ಸಂಭ್ರಮದೊಂದಿಗೆ ಇಂದು ನಾಡಿನೆಲ್ಲಡೆ ಆಯುಧ ಪೂಜಾ ಸಮಾರಂಭಗಳು ನಡೆದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಎಲ್ಲೆಡೆ ದೇವ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ಹವನಗಳು ನೆರವೇರಿದವು. ನಗರದ ದಶಮಂಟಪಗಳ ದೇವ ಸನ್ನಿಧಿಗಳು ಸಹಿತ ಬಹುತೇಕ ಎಲ್ಲ ದೇವಾಲಯಗಳಲ್ಲಿ ಸಂಘ ಸಂಸ್ಥೆಗಳಲ್ಲಿ ವ್ಯಾಪಾರೋದ್ಯಮಗಳು, ಆಯುಧ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ವಿಶೇಷವಾಗಿ ವಾಹನಗಳ ಮಾಲೀಕರು, ಚಾಲಕರು ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ತಾ. 21ರಿಂದ ವಿದ್ಯುಕ್ತವಾಗಿ ನವರಾತ್ರಿ ಆರಂಭಗೊಳ್ಳುವದರೊಂದಿಗೆ, ಜಿಲ್ಲಾ ಕೇಂದ್ರದಲ್ಲಿ ನಾಲ್ಕು ಶಕ್ತಿ ದೇವಾಲಯಗಳ ಕರಗ ಉತ್ಸವ ಮಡಿಕೇರಿಯಾದ್ಯಂತ ಸಂಚರಿಸಿತು. ಇಂದು ಮಹಾನವಮಿ ಪ್ರಯುಕ್ತ ದೇವಾಲಯಗಳಲ್ಲಿ ಪೂಜೆ, ಹೋಮ ಹವನಗಳು ನಡೆದವು. ಈ ಸಲುವಾಗಿ ಹೂವು, ಹಣ್ಣು, ಬಾಳೆ, ಕಬ್ಬು ಇತ್ಯಾದಿ ಭರಾಟೆಯ ಮಾರಾಟ ಎದುರಾಯಿತು. ಆಯುಧ ಪೂಜೆಯ ವಿಶೇಷವೆಂಬಂತೆ ನಗರದ ಬಹುಮಹಡಿ ಕಟ್ಟಡಗಳು, ಸರಕಾರಿ ಕಚೇರಿಗಳು, ಹೊಟೇಲ್ ಉದ್ಯಮಗಳ ಸಹಿತ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಶೃಂಗಾರ ಕಳೆಕಟ್ಟಿತು. ಮಡಿಕೇರಿ ಗಾಂಧಿ ಮೈದಾನದಲ್ಲಿ ವಿಶಿಷ್ಟವಾಗಿ ಅಲಂಕಾರಗೊಂಡು ವಿವಿಧ ಕಲಾಕೃತಿಗಳನ್ನು ಅಳವಡಿಸಿಕೊಂಡು ಬಂದಿದ್ದ ಹಲವಾರು ವಾಹಗಳು ನೋಡುಗರ ಗಮನ ಸೆಳೆದವು.

(ಮೊದಲ ಪುಟದಿಂದ) ದಸರಾ ನಾಡಹಬ್ಬಕ್ಕೆ ಆಹ್ವಾನಿಸುವ ರೀತಿಯಲ್ಲಿ ನಗರದ ಪ್ರಮುಖ ರಸ್ತೆಗಳ ಇಕ್ಕಡೆಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಅಟಿಕೆಗಳು ಸಹಿತ ಗೊಂಬೆಗಳ ಮಾರಾಟ ಮಳಿಗೆಗಳು ತಲೆಯೆತ್ತಿದ್ದರೆ, ದಾರಿಹೋಕರನ್ನು ಹಿಡಿದಿಡುವ ವಿನೂತನ ಸರಕುಗಳೊಂದಿಗೆ ನಿತ್ಯೋಪಯೋಗಿ ವಸ್ತುಗಳ ಮಳಿಗೆಗಳು ಅಲ್ಲಲ್ಲಿ ಗೋಚರಿ ಸತೊಡಗಿದೆ. ಆಯುಧ ಪೂಜಾ ಸಮಾರಂಭದ ಸಿಂಗಾರದ ನಡುವೆ ವಿಜಯದಶಮಿಯ ಐತಿಹಾಸಿಕ ಕ್ಷಣ ಎದುರುಗೊಳ್ಳಲು ಜಿಲ್ಲಾ ಕೇಂದ್ರ ಸಜ್ಜುಗೊಂಡಿದೆ.

ಆಯುಧ ಪೂಜಾ ಸಮಾರಂಭ

ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯುಧ ಪೂಜಾ ಸಮಾರಂಭವನ್ನು ನಗರಸಭಾ ಉಪಾಧ್ಯಕ್ಷ, ದಸರಾ ಸಮಿತಿ ಉಪಾಧ್ಯಕ್ಷರಾದ ಟಿ.ಎಸ್. ಪ್ರಕಾಶ್ ಉದ್ಘಾಟಿಸಿದರು. ಈ ಸಂದರ್ಭ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಗೌರವ ಕಾರ್ಯದರ್ಶಿ ಶುಭಾ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಇದ್ದರು.