ಗೋಣಿಕೊಪ್ಪಲು, ಅ. 1: ಪಾಲಿಬೆಟ್ಟ ಗ್ರಾ.ಪಂ.ಗೆ ಇಂದು ಬೆಂಗಳೂರಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ.

ಗ್ರಾಮೀಣ ಕರ್ನಾಟಕದ 1836 ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಪಾಲಿಬೆಟ್ಟಕ್ಕೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗುತ್ತಿರುವದಾಗಿ ಪಿಡಿಓ ಎ.ಎ. ಅಬ್ದುಲ್ಲಾ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಮೇಕ್ರಿ ವೃತ್ತದ ಬಳಿ ಇರುವ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಗಾಂಧಿಜಯಂತಿ ದಿನವಾದ ಇಂದು 12.30 ಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಕಳೆದ 3 ವರ್ಷಗಳಲ್ಲಿ ಒಟ್ಟು ನಾಲ್ಕು ರಾಜ್ಯ ಪ್ರಶಸ್ತಿ ಹಾಗೂ ಒಂದು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಪಾಲಿಬೆಟ್ಟ ಗ್ರಾ.ಪಂ. ಜಿಲ್ಲೆಯಲ್ಲಿಯೇ ಕುಡಿಯುವ ನೀರಿಗೆ ಶೇ. 100 ರಷ್ಟು ಮೀಟರ್ ಅಳವಡಿಕೆ ಮಾಡಿದ ಗ್ರಾಮವಾಗಿದೆ. ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿಯೇ ಮೊದಲ ಟ್ಯಾಂಕರ್ ಖರೀದಿ, ಜಿಲ್ಲೆಯಲ್ಲಿಯೇ ಮಾದರಿ ವೈಜ್ಞಾನಿಕ ಕಸವಿಲೇವಾರಿ ಘಟಕ ಸ್ಥಾಪನೆ 2014ರಿಂದ ಶೇ. 100 ಫ್ಲಾಸ್ಟಿಕ್ ಮುಕ್ತ ಗ್ರಾಮ, ಕುಡಿಯುವ ನೀರಿನ ದುರ್ಬಳಕೆಗೆ ರೂ. 500 ರಿಂದ ರೂ. 5000 ದವರೆಗೆ ದಂಡ ವಿಧಿಸುವದೂ ಒಳಗೊಂಡಂತೆ ಹಲವು ಜನಪರ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇಂದು ರಾತ್ರಿ ಬೆಂಗಳೂರಿಗೆ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಪಿಡಿಓ ಅಬ್ದುಲ್ಲಾ, ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ತೆರಳಲಿದ್ದಾರೆ.

ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ, ಮಡಿಕೇರಿ ತಾಲೂಕಿನ ಗಾಳಿಬೀಡು ಹಾಗೂ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾ.ಪಂ.ಗಳು ತಾ. 2 ರಂದು (ಇಂದು) ಗಾಂಧಿ ಗ್ರಾಮ ಪುರಸ್ಕಾರವನ್ನು ಸ್ವೀಕರಿಸಲಿದೆ. ಈ ವರ್ಷದ ನವೆಂಬರ್ ಅಂತ್ಯದೊಳಗೆ ಈ ಎಲ್ಲ ಗ್ರಾ.ಪಂ.ಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಗಳಾಗಿ ಘೋಷಿಸಿ ಕೊಳ್ಳಲು ಷರತ್ತು ವಿಧಿಸಿದೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮಿತಿ ಮೂರು ಗ್ರಾ.ಪಂ.ಗಳನ್ನು ಅಂತಿಮವಾಗಿ ಆಯ್ಕೆ ಮಾಡಿದೆ. - ಟಿ.ಎಲ್. ಶ್ರೀನಿವಾಸ್