ವೀರಾಜಪೇಟೆ, ಸೆ. 29: ಪ್ರತಿಯೊಂದು ಹಂತದಲ್ಲಿಯೂ ವiನುಷ್ಯನಿಗೆ ಕಾನೂನು ಅಗತ್ಯವಿರುವದರಿಂದ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಂಡು ಇತರರಿಗೂ ಅದರ ಅರಿವು ಮೂಡಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಕರೆ ನೀಡಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಅನೇಕ ಕಾನೂನುಗಳು ಜಾರಿಯಲ್ಲಿದ್ದು ಜನರಿಗೆ ಬೇಕಾಗಿರುವಂತಹ ಕಾನೂನನ್ನು ತಿಳಿದುಕೊಂಡಲ್ಲಿ ಅಪರಾಧಗಳು ಕಡಿಮೆಯಾಗುತ್ತದೆ. ಇದಕ್ಕಾಗಿ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ಕಾನೂನು ಅರಿವು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ಪ್ರತಿಯೊಬ್ಬರು ಕಾನೂನು ಪಾಲನೆ ಮಾಡಬೇಕಾಗಿರುವದರಿಂದ ಕಾನೂನು ತಿಳಿದುಕೊಳ್ಳುವದು ಸೂಕ್ತ. ಕೊಡಗಿನ ಜನರು ಹಿಂದಿನಿಂದಲೂ ಶಿಸ್ತುಪಾಲನೆ ಮಾಡುವಂತವರು. ವೀರಾಜಪೇಟೆ ತಾಲೂಕಿನ ಅರಣ್ಯದ ಅಂಚಿನಲ್ಲಿ ವಾಸಿಸುವ ಹಾಡಿ ಜನಾಂಗದವರಿಗೆ ಶಿಕ್ಷಣದ ಕೊರತೆಯಿದ್ದು ಅಂತವರಿಗೆ ಕಾನೂನು ಮತ್ತು ಶಿಕ್ಷಣದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೋಲಿಸ್ ಉಪ ಅಧೀಕ್ಷಕ ನಾಗಪ್ಪ ಮಾತನಾಡಿ, ಮಾಹಿತಿ ಕೊರತೆಯಿಂದ ಅಪರಾಧಗಳು ನಡೆಯುತ್ತವೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು. ಸಾರ್ವಜನಿಕರು ಕಾನೂನಿನ ಅರಿವು ಪಡೆದುಕೊಂಡಲ್ಲಿ ಅಪರಾಧಗಳು ಕಡಿಮೆಯಾಗಲು ಸಾಧ್ಯ. ಎಲ್ಲರೂ ಸೇರಿ ಅಪರಾಧಗಳನ್ನು ತಡೆಯಲು ಪಣತೊಡಬೇಕಾಗಿದೆ ಎಂದು ಹೇಳಿದರು.
ವಕೀಲ ಬಿ.ಬಿ. ಮಾದಪ್ಪ ತಮ್ಮ ಉಪನ್ಯಾಸದಲ್ಲಿ ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳುವಂತೆ ಸಾಕ್ಷ ಚಿತ್ರ ತೋರಿಸಿದರು. ವೇದಿಕೆಯಲ್ಲಿ ವೃತ್ತ ನಿರೀಕ್ಷಕ ಎನ್. ಕುಮಾರ್ ಆರಾದ್ಯ , ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಉಪಸ್ಥಿತರಿದ್ದರು, ನಗರ ಠಾಣಧಿಕಾರಿ ಸಂತೋಷ್ ಕಶ್ಯಪ್ ಸ್ವಾಗತಿಸಿದರೆ. ಎಂ.ಎಸ್. ಬೋಪಣ್ಣ ನಿರೂಪಿಸಿದರು.