ಕೂಡಿಗೆ, ಸೆ. 29: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ರವಿಚಂದ್ರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಕೂಡಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಸಂಘಟನೆಗಳು, ಪ್ರಮುಖರು, ವಿವಿಧ ಪಕ್ಷಗಳ ಮುಖಂಡರು ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮುಖ ಇಲಾಖೆಗಳನ್ನು ಹೊಂದಿರುವ ಕೂಡಿಗೆ ಡೈರಿ ಸೇರಿದಂತೆ ಜಿಲ್ಲೆಯ ಪ್ರಮುಖ 46 ಕಾಫಿ ಸಂಸ್ಕರಣ ಘಟಕ ಹಾಗೂ ಇತರೆ ವಿವಿಧ ಕೈಗಾರಿಕ ಘಟಕಗಳನ್ನು ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರವು ಮುಖ್ಯವಾಗಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯವಾಗಿದ್ದರೂ, ವೈದ್ಯಾಧಿಕಾರಿ ರವಿಚಂದ್ರ ಈ ಎರಡು ಪಂಚಾಯಿತಿಗಳಲ್ಲದೆ ಗಡಿಭಾಗದ ಶಿರಂಗಾಲ ಹಾಗೂ ಸಮೀಪದ ಪಿರಿಯಾಪಟ್ಟಣ ತಾಲೂಕಿನ ಕೆಲವು ಗ್ರಾಮದ ಜನರು ಕಣಿವೆಯ ತೂಗುಸೇತುವೆಯ ಮೂಲಕ ಕೂಡಿಗೆಗೆ ಬಂದು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಡಾ. ರವಿಚಂದ್ರ ಅವರನ್ನು ವರ್ಗಾವಣೆ ಮಾಡುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸುವದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.