ನಾಪೋಕ್ಲು, ಅ. 1: ಸ್ನೇಹಿತ ರೊಂದಿಗೆ ಜಲಪಾತ ವೀಕ್ಷಣೆಗೆ ತೆರಳಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತದಲ್ಲಿ ಇಂದು ನಡೆದಿದೆ. ಮೂಲತಃ ಕೊಡಗಿನವರೇ ಆಗಿದ್ದು, ಪ್ರಸ್ತುತ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿರುವ ಮಂಡೇಡ ಕಾವೇರಪ್ಪ ಎಂಬವರ ಪುತ್ರ ದರ್ಶನ್ (22) ಎಂಬಾತನೇ ಮೃತಪಟ್ಟ ದುರ್ದೈವಿ. ಈತ ಬೆಂಗಳೂರಿನ ಕೆಎಸ್ಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿ ದಸರಾ ವೀಕ್ಷಣೆಗೆಂದು ಶನಿವಾರ ತನ್ನ ಮಾವನ ಮನೆ ಸಿದ್ದಾಪುರಕ್ಕೆ ಆಗಮಿಸಿದ್ದ. ದಸರಾ ವೀಕ್ಷಿಸಿದ ಬಳಿಕ ಇಂದು ಮಧ್ಯಾಹ್ನ ಒಂದು ಗಂಟೆಯ ಸಮಯಕ್ಕೆ ಚೇಲಾವರ ಜಲಪಾತ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ತೆರಳಿದ್ದರೆನ್ನಲಾಗಿದೆ. ಈ ಸಂದರ್ಭ ದರ್ಶನ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಜಲಪಾತದಲ್ಲಿ ನೀರಿನ ರಭಸ ಹೆಚ್ಚಿದ್ದು ಆತನ ಶವ ಹೊರತೆಗೆಯಲು ಸಾಧ್ಯವಾಗಿಲ್ಲ. ನಾಪೋಕ್ಲು ಠಾಣಾಧಿಕಾರಿ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಚೇಲಾವರದಲ್ಲಿ ನೀರಿನಲ್ಲಿ ಸಂಭ್ರಮಿಸಿ ಬಳಿಕ ತಲಕಾವೇರಿಗೆ ತೆರಳಿ ಸಿದ್ದಾಪುರಕ್ಕೆ ತೆರಳುವ ಉದ್ದೇಶ ವಿಟ್ಟುಕೊಂಡು ಸ್ನೇಹಿತರೊಂದಿಗೆ ಬಂದಿದ್ದ ದರ್ಶನ್, ಇಹಲೋಕವನ್ನೇ ತ್ಯಜಿಸಿದುದು ವಿಧಿಯಾಟವೆನಿಸಿದೆ.