ಗೋಣಿಕೊಪ್ಪಲು, ಅ. 1: ಇಲ್ಲಿನ ಗ್ರಾಮಾಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ರೂ 1.23 ಕೋಟಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಯಂ.ವಿಜು ಚಿಟ್ಟಿಯಪ್ಪ ತಿಳಿಸಿದರು.
ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಸಂಘದ ಒಟ್ಟು ವ್ಯವಹಾರ ರೂ 214 ಕೋಟಿಗಳಷ್ಟಿದೆ. ದುಡಿಯುವ ಬಂಡವಾಳ ರೂ 55.19 ಕೋಟಿ ಗಳಷ್ಟಾಗಿದ್ದು 1993 ಸದಸ್ಯರಿಂದ ರೂ. 2.30 ಕೋಟಿ ಪಾಲು ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ರೂ. 45.21 ಕೋಟಿಯಷ್ಟು ಸದಸ್ಯರಿಂದ ಠೇವಣಿ ಸಂಗ್ರಹಿಸಿದ್ದು ಸದಸ್ಯರಿಗೆ ರೂ 34.10 ಕೋಟಿ ವಿವಿಧ ರೀತಿಯ ಸಾಲ ನೀಡಲಾಗಿದೆ. ಇದರಲ್ಲಿ 27.23 ಕೋಟಿ ವಸೂಲಾಗಿದೆ. ಸದಸ್ಯರಿಗೆ ಶೇ,25 ರಷ್ಟು ಡೆವಿಡೆಂಡ್ ಘೋಷಿಸಲಾಗಿದೆ. ಸಂಘದ ಹೆಸರಿನಲ್ಲಿ ವೀರಾಜಪೇಟೆ ಮೈಸೂರು ಮುಖ್ಯ ರಸ್ತೆ ಬದಿಯಲ್ಲಿ ಹೊಸ ನಿವೇಶನ ಖರೀದಿಸ ಲಾಗುವದು. ಕೃಷಿ ಸಾಲದ ಜೊತೆಗೆ ಕೃಷಿಯೇತರ ಸಾಲವಾದ ಕ್ಯಾಷ್ ಕ್ರೆಡಿಟ್ ಸಾಲ, ಜಾಮೀನು ಸಾಲ, ಆಭರಣ ಸಾಲ, ವಾಹನ ಸಾಲಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಸಂಘದ ಮುಂಭಾಗದಲ್ಲಿ 17.50 ಸೆಂಟ್ ಜಾಗವನ್ನು ಮಾರುಕಟ್ಟೆ ದರ ರೂ. 2 ಕೋಟಿ 45 ಲಕ್ಷಕ್ಕೆ ಖರೀದಿಸಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ರೂ 61 ಲಕ್ಷದ 25 ಸಾವಿರವನ್ನು ಪಾವತಿಸಲಾಗಿದೆ. ಸಂಘವು ‘ಎ’ ಗ್ರೇಡ್ ಹೊಂದಿದ್ದು 1993 ಸದಸ್ಯರಿಂದ 2 ಕೋಟಿ 3ಲಕ್ಷದ 7 ಸಾವಿರದ 112 ರೂಪಾಯಿ ಪಾಲು ಹಣ ಸಂಗ್ರಹಿಸಲಾಗಿದೆ. ಸದಸ್ಯರಿಂದ ರೂ. 45 ಕೋಟಿ 21 ಲಕ್ಷದ 37 ಸಾವಿರದ 79 ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 34,10,96,910 ರೂ. ಸಾಲ ಬಟಾವಾಡೆ ಮಾಡಲಾಗಿದೆ. 272368320 ರೂ. ಸಾಲ ವಸೂಲಾಗಿದೆ ಎಂದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ. ಚಂದ್ರಶೇಖರ್ ರೈ, ಉಪಾಧ್ಯಕ್ಷ ಕಬ್ಬಚ್ಚೀರ ಪ್ರಭು, ನಿರ್ದೇಶಕರಾದ ಜೆ.ಸಿ. ಮೋಹನ್, ಸಿ.ಟಿ. ಗಣಪತಿ, ಕೆ.ಎಸ್. ಗಣಪತಿ, ಮಾದಪ್ಪ, ಕೆ.ಯಂ ಪಾರ್ವತಿ, ಜೆ.ಎ. ಸೌಮ್ಯ, ಬಿ.ಸಿ. ಮಾದಯ್ಯ ಹಾಜರಿದ್ದರು.