ಮಡಿಕೇರಿ, ಅ.1: ದಸರಾ ಮುಸ್ಸಂಜೆಗತ್ತಲೆ ನಡುವೆ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ್ದಲ್ಲದೆ, ಆತನನ್ನು ಮತ್ತೆ ಮತ್ತೆ ಹಿಂಬಾಲಿಸಿ ಬೆಳಗಿನ ಜಾವ ಮಾರಕಾಸ್ತ್ರದಿಂದ ತಿವಿದು ಕೊಲೆಗೈದಿರುವ ಕೃತ್ಯ ಮಹದೇವಪೇಟೆ ಯಲ್ಲಿ ಇಂದು ಸಂಭವಿಸಿದೆ.ನಗರದ ಹೊರವಲಯದ ರಾಜರಾಜೇಶ್ವರಿ ನಗರ ನಿವಾಸಿ ಕಾರ್ಮಿಕ ಮೂರ್ತಿ ಹಾಗೂ ಚಂದ್ರಮ್ಮ ದಂಪತಿ ಪುತ್ರ ಚಂದ್ರಶೇಖರ್ (27) ಎಂಬಾತನೇ ಕೊಲೆಗೀಡಾದ ಯುವಕ. ನಿನ್ನೆ ಸಂಜೆಗತ್ತಲೆ ನಡುವೆ ಕಾರೊಂದರಲ್ಲಿ ಧಾವಿಸಿದ ಯುವಕರು ಕಾಲೇಜು ರಸ್ತೆಯಲ್ಲಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿದುಬಂದಿದೆ.

ಆ ಬಳಿಕ ಕೆಲ ಹೊತ್ತಿನಲ್ಲಿ ಕಾರ್ಪೋರೇಷನ್ ಬ್ಯಾಂಕ್ ಬಳಿ ಮತ್ತೆ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಕೆಲವರು ಆತನನ್ನು ಹಲ್ಲೆಕೋರರಿಂದ ರಕ್ಷಿಸಿ ಕಳುಹಿಸಿಕೊಟ್ಟಿದ್ದಾಗಿ ಗೊತ್ತಾಗಿದೆ. ಈ ಕೃತ್ಯದ ಬಳಿಕ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಹದೇವಪೇಟೆ ಕನ್ನಿಕಾಪರಮೇಶ್ವರಿ ದೇವಾಲಯ ಎದುರು ಚಂದ್ರಶೇಖರ್ ಎಡಕಿವಿ ಹಿಂಭಾಗಕ್ಕೆ ಮಾರಕಾಸ್ತ್ರದಿಂದ ಘಾಸಿಯೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

ಈತನ ಸಂಬಂಧಿ ಎಸ್.ಎಸ್. ಮೋಹನ್ ಹಾಗೂ ಕುಟುಂಬ ಅದೇ ಮಾರ್ಗದಲ್ಲಿ ದಸರಾ ನೋಡಲು ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಶೇಖರ್‍ನನ್ನು ಕಂಡು ಕೂಡಲೇ ಪೊಲೀಸ್ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಈ ವೇಳೆ ವೈದ್ಯರು ಆತ ಮೃತಪಟ್ಟಿರು ವದಾಗಿ ಖಚಿತಪಡಿಸಿದ್ದಾರೆ. ಮೃತ ಹೊಟೇಲ್‍ವೊಂದರ ನೌಕರನಾಗಿದ್ದು, ಬಿಡುವಿನ ವೇಳೆ ಆಟೋ ಓಡಿಸುತ್ತಿದ್ದ ಎಂದು ಗೊತ್ತಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು, ಸಾರ್ವಜನಿಕರ ಸುಳಿವಿನ ಮೇರೆಗೆ ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ. ಮೃತ ಚಂದ್ರಶೇಖರ್ ಶವದ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಪಾರ್ಥಿವ ಶರೀರ ಹಸ್ತಾಂತರಿಸ ಲಾಯಿತು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಆರೋಪಿಗಳಿಗೂ, ಮೃತನಿಗೂ ಗಾಂಜಾ ವಿಚಾರದಲ್ಲಿ ಮನಸ್ತಾಪವಿತ್ತೆಂದು ಪೊಲೀಸ್ ಮೂಲಗಳು ಶಂಕಿಸಿವೆ.