ಗೋಣಿಕೊಪ್ಪಲು, ಅ. 1: ಭಾರತೀಯ ಸಂಸ್ಕೃತಿಗೆ ಸುಮಾರು 20 ಸಾವಿರ ವರ್ಷ ಇತಿಹಾಸವಿದೆ. ಆದರೆ, ಅಮೇರಿಕಾ ಸಂಸ್ಕೃತಿಗೆ 500 ವರ್ಷದ ಮಾತ್ರಾ ಇತಿಹಾಸ. ಕನ್ನಡ ಭಾಷೆಗೂ ಸುಮಾರು 3 ಸಾವಿರ ವರ್ಷಗಳ ಇತಿಹಾಸವಿದೆ. ರಾಜಕೀಯ ವ್ಯಕ್ತಿಗಳಿಂದ, ಸರ್ಕಾರದಿಂದ ನಮ್ಮ ಕನ್ನಡ ಭಾಷೆ ಉಳಿಸುವದು ಅಸಾಧ್ಯ. ಇಲ್ಲಿನ ಮಣ್ಣಿನ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಮೂಡಬಿದ್ರಿ ಆಳ್ವಾಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥ ಡಾ. ಮೋಹನ್ ಆಳ್ವ ವಿಶ್ಲೇಷಿಸಿದರು.
ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕಾವೇರಿ ಕಲಾ ವೇದಿಕೆಯಲ್ಲಿ ಜರುಗಿದ 39 ನೇ ವರ್ಷದ ದಸರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಬೆಳವಣಿಗೆ ನಿಟ್ಟಿನಲ್ಲಿ ಮೂಡಬಿದ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಕನ್ನಡ ಶಿಕ್ಷಣ ಶಾಲೆ ಆರಂಭಿಸಲಾಗಿದೆ. ವರ್ಷಕ್ಕೆ ನಮ್ಮ ಟ್ರಸ್ಟ್‍ವತಿಯಿಂದ ರೂ.5 ಕೋಟಿ ವೆಚ್ಚಮಾಡಲಾಗುತ್ತಿದೆ. ಈ ಬಾರಿ ಕನ್ನಡ ಶಾಲೆ ಪ್ರವೇಶಕ್ಕೆ ಒಟ್ಟು 750 ವಿದ್ಯಾರ್ಥಿಗಳನ್ನು ಆಯ್ಕೆಮಾಡಲು ಪ್ರವೇಶ ಪರೀಕ್ಷೆಗೆ 17,500 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಕನ್ನಡ ಶಾಲೆಗೆ ಮಕ್ಕಳು ಸಿಗುವದಿಲ್ಲ ಎಂಬ ವಾದ ಸರಿಯಲ್ಲ ಎಂದು ಉದಾಹರಣೆ ನೀಡಿದರು.
ಪೂರ್ವಜರ ತ್ಯಾಗ ಬಲಿದಾನ ದಿಂದಾಗಿ ಭಾರತೀಯ ಭಾಷೆ ಹಾಗೂ ಸಂಸ್ಕೃತಿ ಉಳಿದಿದೆ. ರಾಜ ಮನೆತನದ ಕಾಲದಲ್ಲಿಯೂ ಈ ನೆಲದ ಭಾಷೆಯನ್ನು ಉಳಿಸುವ ಪ್ರಯತ್ನ ನಡೆದಿದೆ ಎಂದರು.
ಹಿಂದೂಸ್ತಾನಿ ಸಂಗೀತ, ಗಾಳಿವಾದ್ಯ, ತಂತಿವಾದ್ಯ ಸಂಸ್ಕೃತಿ, ಜಾನಪದ ಕಲೆ ಉಳಿಸಲು ಮೂಡಬಿದ್ರಿಯಲ್ಲಿ ವರ್ಷಕ್ಕೊಮ್ಮೆ ಆಳ್ವಾ ನುಡಿಸಿರಿ, ವಿರಾಸತ್ ಕಾರ್ಯಕ್ರಮದಲ್ಲಿ ದೇಶದ ಕಲಾವಿದರಿಗೆ ಅವಕಾಶ ಮಾಡಿಕೊಟ್ಟು ಗೌರವಿಸುವ ಕೆಲಸ ನಡೆಯುತ್ತಿದೆ. ದೇಶದ ಕಲೆ, ಪರಿಸರ, ಜೀವನ ಬದ್ಧತೆ, ಸಾಮರಸ್ಯವನ್ನು ಸೌಂದರ್ಯ ಪ್ರಜ್ಞೆ ಇದ್ದವನು ಮಾತ್ರಾ ಪ್ರೀತಿಸಲು ಸಾಧ್ಯ ಎಂದು ಬಣ್ಣಿಸಿದರು. ಗೋಣಿಕೊಪ್ಪಲು ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇಲ್ಲಿನ ದಸರಾ ಬೆಳ್ಳಿಹಬ್ಬವನ್ನು ತಾನು ಖುದ್ದು ವೀಕ್ಷಣೆ ಮಾಡಿದ್ದಾಗಿ ತಿಳಿಸಿದರು.
ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಗೋಣಿಕೊಪ್ಪಲು ದಸರಾ ಹುಟ್ಟು ಹಾಕಿದ ಹಿರಿಯ ಚೇತನರನ್ನು ಮರೆಯಬಾರದು. ಮಹಾಭಾರತದಲ್ಲಿ ಪಾಂಡವರು ವನವಾಸದ ನಂತರ ಬನ್ನಿಮರದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ತೆಗೆದು ಕೌರವರನ್ನು ಸಂಹಾರ ಮಾಡಿದ ಪ್ರತೀಕವಾಗಿಯೂ ವಿಜಯದಶಮಿಯನ್ನು ಆಚರಿಸಲಾಗುತ್ತಿದೆ. ಮೈಸೂರು, ಮಡಿಕೇರಿ ದಸರಾದೊಂದಿಗೆ ಗೋಣಿಕೊಪ್ಪಲು ಇತ್ತೀಚೆಗೆ ಸ್ಪರ್ಧಾತ್ಮಕವಾಗಿ ಉತ್ತಮ ಕಾರ್ಯಕ್ರಮ ನೀಡುತ್ತಾಬಂದಿದೆ ಎಂದು ಶುಭಹಾರೈಸಿದರು.
ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಕೊಡಗಿನ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಆಚರಣೆಗೆ ಅನುದಾನ ವಿಚಾರದಲ್ಲಿ ಪ್ರತಿವರ್ಷವೂ ಸಂಘಟಕರು ಒತ್ತಡವನ್ನು ಎದುರಿಸುತ್ತಿದ್ದು, ಇಲ್ಲಿಗೆ ಅನುದಾನವನ್ನು ಬಜೆಟ್ ಮಂಡನೆಯ ಸಂದರ್ಭವೇ ಕಾಯ್ದಿರಿಸಲು ಮನವಿ ಮಾಡಿದರು.
ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೆÇನ್ನಪ್ಪ ಅವರು, ದಸರಾ ನಾಡಹಬ್ಬ ಜಾತ್ಯತೀತ ಮನೋಭಾವನೆಯೊಂದಿಗೆ, ದೇಶದ ಸುಭೀಕ್ಷೆಗಾಗಿ ಒಗ್ಗಟ್ಟಿನಿಂದ ಆಚರಿಸುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಿನ ಸಾಲಿನಿಂದ ದಸರಾದಲ್ಲಿ ಒಂದು ದಿನ ರೈತಪರ ಕಾರ್ಯಕ್ರಮಕ್ಕೂ ಅನುವು ಮಾಡಿಕೊಡುವಂತೆ ಕಾವೇರಿ ದಸರಾ ಸಮಿತಿ ಸಂಘಟಕರಿಗೆ ಮನವಿ ಮಾಡಿದರು.
ಮಾಜಿ ಎಂಎಲ್‍ಸಿ ಅರುಣ್‍ಮಾಚಯ್ಯ, ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಹಾಗೂ ಸಿ.ಕೆ. ಬೋಪಣ್ಣ, ದಸರಾ ನಾಡಹಬ್ಬ ಧರ್ಮ ಹಾಗೂ ಜಾತೀಯ ಆಧಾರದಲ್ಲಿ ನಡೆಯುತ್ತಿಲ್ಲ. ಕೋಮು ಸೌಹಾರ್ದತೆಯನ್ನು ಬಿಂಬಿಸಲು ದಸರಾ ಆಚರಣೆ ಉತ್ತಮ ವೇದಿಕೆಯಾಗಿದೆ ಎಂದು ಶುಭಕೋರಿದರು.
ಅಧ್ಯಕ್ಷರ ಭಾಷಣ ಮಾಡಿದ ಕುಲ್ಲಚಂಡ ಗಣಪತಿ ಅವರು, ರಾಜಕೀಯ ರಹಿತ ವೇದಿಕೆ ಇದಾಗಿದ್ದು, ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ ಈ ಬಾರಿ ಯಶಸ್ವಿಯಾಗಿ ನಡೆದಿದೆ. ಗೋಣಿಕೊಪ್ಪಲು ದಸರಾ ಸಂದರ್ಭ ಹಿರಿಯ ಚೇತನರನ್ನೂ ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಗೋಣಿಕೊಪ್ಪಲಿನ ಎಲ್ಲರೂ ರಾಜಕೀಯ ರಹಿತವಾಗಿ ವಿಜೃಂಭಣೆಯಿಂದ ಆಚರಿಸಲು ಕೈಜೋಡಿಸಲು ಮನವಿ ಮಾಡಿದರು.
ಇದೇ ಸಂದರ್ಭ ಈ ಹಿಂದೆ ಗೋಣಿಕೊಪ್ಪಲು ದಸರಾ ನಾಡಹಬ್ಬ ಯಶಸ್ಸಿಗೆ ಕಾರಣರಾದ ಕೆ.ರಾಮಾಚಾರ್, ಕೆ.ಆರ್. ಬಾಲಕೃಷ್ಣ ರೈ, ಕೇಶವ್ ಕಾಮತ್, ಕೊಂಗಂಡ ಮನೋಜ್ ಹಾಗೂ ಶ್ರೀಧರ್ ನೆಲ್ಲಿತ್ತಾಯ ಅವರನ್ನು ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಎಂ. ಸೆಲ್ವಿ ಉಪಸ್ಥಿತರಿದ್ದರು.
ಸ್ವಾಗತ, ಪ್ರಾಸ್ತಾವಿಕ ಶ್ರೀ ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್, ಪ್ರಾರ್ಥನೆ ನವೀನ್ ಕಿರುಗೂರು, ನಿರೂಪಣೆ ಶೀಲಾ ಬೋಪಣ್ಣ, ಶಿಕ್ಷಕಿ ಓಮನಾ, ರೇಖಾ ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ವಂದನಾರ್ಪಣೆ ಮಾಡಿದರು.
ನಂತರ ಕಾವೇರಿ ಕಲಾ ವೇದಿಕೆಯಲ್ಲಿ ಮಂಗಳೂರಿನ ನೌಶಾದ್ ತಂಡದ ರಸಮಂಜರಿ ಏರ್ಪಡಿಸಲಾಗಿತ್ತು.
ಮಳೆಯ ಆರ್ಭಟ: ಕಾವೇರಿ ಕಲಾ ವೇದಿಕೆ ಕಾರ್ಯಕ್ರಮ ಸಂದರ್ಭ ಮಳೆರಾಯ ಆರ್ಭಟ ಶುರುವಾಗಿತ್ತು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕೆಸರಿನ ಗದ್ದೆಯಂತಾಗಿದ್ದಾರೂ ದಸರಾ ಪ್ರಿಯರು ಮಳೆಯಲ್ಲಿಯೇ ಕಾರ್ಯಕ್ರಮ ವೀಕ್ಷಣೆಗೆ ತಂಡೋಪ ತಂಡವಾಗಿ ಹರಿದುಬಂದರು. ನಂತರ ಮಳೆ ಬಿಡುವು ನೀಡಿತ್ತಾದರೂ ದಶಮಂಟಪ ಶೋಭಾಯಾತ್ರೆ ನಿಗಧಿತ ಅವಧಿಯಲ್ಲಿ ಹೊರಡಲು ಸಾಧ್ಯವಾಗಲಿಲ್ಲ. ಪರಿಣಾಮ ಇಂದು ಬೆಳಿಗ್ಗೆ 8 ಗಂಟೆಯವರೆಗೂ ಅಂತಿಮವಾಗಿ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿಯ ಕಲಾಕೃತಿಯ ಗಣಪತಿಯಿಂದ ಅಸುರನ ವಧೆ ಚಿತ್ರಣವನ್ನು ಪ್ರದರ್ಶನ ಮಾಡಬೇಕಾಗಿ ಬಂತು.
ವರದಿ: ಟಿ.ಎಲ್.ಶ್ರೀನಿವಾಸ್