ಸೋಮವಾರಪೇಟೆ, ಸೆ. 29: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಹಿಡಿದಿರುವ ತ್ಯಾಜ್ಯ ವಿಲೇವಾರಿ ಗ್ರಹಣ ಸದ್ಯಕ್ಕೆ ಬಿಡುವಂತೆ ಗೋಚರಿಸುತ್ತಿಲ್ಲ. ದೂರದ ಸಿದ್ದಲಿಂಗಪುರದಲ್ಲಿ ಖರೀದಿಸಲಾಗಿರುವ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ನಂತರ ಹುಟ್ಟಿಕೊಂಡ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ.
ಇದೀಗ ಇಲ್ಲಿನ ತಾಲೂಕು ಪಂಚಾಯಿತಿ ಮುಂಭಾಗವಿರುವ ಕುಡಿಯುವ ನೀರು ಸಂಗ್ರಹಾಗಾರ ಮತ್ತು ಶುದ್ಧೀಕರಣ ಘಟಕದ ಕೇವಲ 20 ಮೀಟರ್ ದೂರದಲ್ಲಿ ಬೃಹತ್ ಗುಂಡಿ ತೆಗೆದು ಅಲ್ಲಿಗೆ ಪಟ್ಟಣದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಜೆಸಿಬಿ ಯಂತ್ರದಿಂದ ಗುಂಡಿ ತೆಗೆದು ಅದರೊಳಗೆ ಪಟ್ಟಣದ ಕಸವನ್ನು ಸುರಿದು ಅದರ ಮೇಲೆ ಮಣ್ಣು ತುಂಬಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಈಗಾಗಲೇ ತ್ಯಾಜ್ಯ ಕೊಳೆಯಲಾರಂಭಿಸಿದ್ದು, ಆಗಾಗ್ಗೆ ಬೀಳುತ್ತಿರುವ ಮಳೆಯಿಂದ ನೀರು ಸಂಗ್ರಹಾಗಾರದ ಪ್ರದೇಶ ಗಬ್ಬೆದ್ದು ನಾರುತ್ತಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳಿಂದ, ಅಂಗಡಿ ಮುಂಗಟ್ಟುಗಳು, ಹೊಟೇಲ್ಗಳು, ಆಸ್ಪತ್ರೆ ಸೇರಿದಂತೆ ಸಾರ್ವಜನಿಕರ ಸ್ಥಳಗಳಿಂದ ಸಂಗ್ರಹವಾಗುವ ತ್ಯಾಜ್ಯಗಳನ್ನು ಕುಡಿಯುವ ನೀರಿನ ಸಂಗ್ರಹಾಗಾರದ ಬಳಿ ವಿಲೇವಾರಿ ಮಾಡುತ್ತಿರುವ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.
ಟ್ರ್ಯಾಕ್ಟರ್ಗಳಲ್ಲಿ ಸಂಗ್ರಹಿಸುವ ಕಸವನ್ನು ನೇರವಾಗಿ ಈ ಪ್ರದೇಶದಲ್ಲಿ ಹಾಕಲಾಗುತ್ತಿದ್ದು, ಈಗಾಗಲೇ ಕ್ರಿಮಿ ಕೀಟಗಳ ಉತ್ಪಾದನಾ ಕೇಂದ್ರವಾಗಿಯೂ ಈ ಜಾಗ ಪರಿವರ್ತನೆಯಾಗಿದೆ. ಸಿದ್ದಲಿಂಗಪುರದಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧ ವ್ಯಕ್ತಗೊಂಡ ನಂತರ ಪಟ್ಟಣಕ್ಕೆ ಸಮೀಪದ ಕರ್ಕಳ್ಳಿಯ ಖಾಸಗಿ ಜಾಗದಲ್ಲಿ ಕಸವನ್ನು ಸುರಿಯಲಾಗುತ್ತಿತ್ತು. ಇದರಿಂದಾಗಿ ಪರಿಸರ ಮಲಿನಗೊಳ್ಳುತ್ತಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತಗೊಂಡ ನಂತರ ಕಸವನ್ನು ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಹರಸಾಹಸ ಪಡುವಂತಾಗಿತ್ತು.
ಕೆಲವು ದಿನಗಳ ಕಾಲ ಇಲ್ಲಿನ ಹೈಟೆಕ್ ಮಾರುಕಟ್ಟೆಯ ಬಳಿಯಲ್ಲೇ ಕಸವನ್ನು ಸಂಗ್ರಹಿಸಿ ಬೆಂಕಿ ಹಚ್ಚಲಾಗುತ್ತಿತ್ತು. ಇದರಿಂದಲೂ ದಟ್ಟ ಹೊಗೆ ಇಡೀ ಪಟ್ಟಣವನ್ನು ಆಕ್ರಮಿಸಿ ಸಾರ್ವಜನಿಕರಿಂದ ಹಿಡಿಶಾಪ ಬೀಳುತ್ತಿದ್ದಂತೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ ಪಂಚಾಯಿತಿಯವರು ಇದೀಗ ಪಟ್ಟಣವಾಸಿಗಳಿಗೆ ನೀರು ಸರಬರಾಜು ಮಾಡುವ ಸಂಗ್ರಹಾಗಾರ ಮತ್ತು ಶುದ್ಧೀಕರಣ ಘಟಕದ ಬಳಿಯಲ್ಲಿಯೇ ಕಸವನ್ನು ವಿಲೇವಾರಿ ಮಾಡುತ್ತಿದೆ.
ಪಂಚಾಯಿತಿಯ ಈ ಕ್ರಮಕ್ಕೆ ಸದಸ್ಯ ಕೆ.ಎ. ಆದಂ ವಿರೋಧ ವ್ಯಕ್ತಪಡಿಸಿದ್ದು, ಪಟ್ಟಣ ಪಂಚಾಯಿತಿ ಆಡಳಿತ ಕಸ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿಯೂ ಆರೋಪಿಸಿದ್ದಾರೆ. ನೀರಿನ ಟ್ಯಾಂಕ್ ಬಳಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವದರಿಂದ ಕಸ ಕೊಳೆತು ಮಲಿನ ನೀರು ಟ್ಯಾಂಕ್ ಸೇರುವ ಸಂಭವ ಅಧಿಕವಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಆದಂ ಅಭಿಪ್ರಾಯಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಈ ಕ್ರಮಕ್ಕೆ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ಸ್ಥಳ ಹುಡುಕಿ ಆ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕ ಉದಯಕುಮಾರ್, ತಾತ್ಕಾಲಿಕವಾಗಿ ಈ ಸ್ಥಳದಲ್ಲಿ ಕಸ ವಿಲೇವಾರಿ ಮಾಡಲಾಗಿತ್ತು. ನೀರಿನ ಟ್ಯಾಂಕ್ಗೆ ತ್ಯಾಜ್ಯದ ನೀರು ಸೇರುತ್ತಿಲ್ಲ. ಆದಾಗ್ಯೂ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವದಿಲ್ಲ. ಬೇರೆ ಸ್ಥಳವನ್ನು ಗುರುತಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.