ನಾಪೋಕ್ಲ್ಲು, ಸೆ. 29: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದು ನಿವೃತ್ತ ಶಿಕ್ಷಕ ಅಯ್ಯಂಡ ರಾಮಕೃಷ್ಣ ಸ್ಥಳೀಯ ಕೊಡವ ಸಮಾಜದಲ್ಲಿ ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಾಂತೀಯ ರಿಜನಲ್ ಚೇರ್ಮನ್ ಭೇಟಿ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯರ ಆದರ್ಶ ಮತ್ತು ಮಾರ್ಗದರ್ಶನದ ಜೊತೆಗೆ ಕ್ರಿಯಾಶೀಲತೆ, ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರವಾದುದು ಎಂದರು. ಅಧ್ಯಕ್ಷ ರತ್ನಾ ಚರ್ಮಣ್ಣ ಮಾತನಾಡಿ, ಸಮಾಜಕ್ಕೆ ನಮ್ಮ ಕೊಡುಗೆ ಹಾಗೂ ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶವನ್ನು ಸದಸ್ಯರು ಅನುಷ್ಠಾನಗೊಳಿಸುವಂತಾಗಬೇಕು ಎಂದರು. ವೇದಿಕೆಯಲ್ಲಿ ಕೇಟೋಳಿರ ರಾಜ ಚರ್ಮಣ್ಣ, ಪಟ್ರಪಂಡ ಸೋಮಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೊಟೇರ ಡಾ. ಪಂಚಮ್ ತಿಮ್ಮಯ್ಯ ಸ್ವಾಗತಿಸಿದರು. ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ಮುತ್ತಪ್ಪ ಧ್ವಜವಂದನೆ ನೆರವೇರಿಸಿ, ಖಜಾಂಚಿ ಕುಂಚೆಟ್ಟೀರ ರೇಷ್ಮಾ ಉತ್ತಪ್ಪ ಮತ್ತು ಚೌರೀರ ಉದಯ ಅತಿಥಿಗಳ ಪರಿಚಯ ಮಾಡಿ ಸಂಸ್ಥೆಯ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ವಂದಿಸಿದರು.