ಕೂಡಿಗೆ, ಅ. 2: ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ, ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಳೆ ಆಶ್ರಿತವಾಗಿ ಮೆಕ್ಕೆಜೋಳವನ್ನು ಬೆಳೆಯುವದು ರೂಢಿಯಲ್ಲಿದೆ. ಮಣ್ಣಿಗುಣವಾಗಿ ಕೃಷಿ ಇಲಾಖೆ ವತಿಯಿಂದ ಜೋಳ ಬೆಳೆಯಲು ಉತ್ತಮ ಬಿತ್ತನೆ ಜೋಳದ ಬೀಜಗಳನ್ನು ಸಹಕಾರ ಸಂಘಗಳ ಮೂಲಕ ಒದಗಿಸುತ್ತಾ ಸಹಕಾರ ನೀಡುತ್ತಿದೆ. ಅದರಂತೆ ಈ ವ್ಯಾಪ್ತಿಯ ಸಾವಿರಾರು ರೈತರು ವರ್ಷಂಪ್ರತಿ ಸಾವಿರಾರು ಕ್ವಿಂಟಲ್ ಜೋಳವನ್ನು ಬೆಳೆದು ಮಾರಾಟ ಮಾಡಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಬೆಳೆದ ಜೋಳವನ್ನು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿದೆ. ಆದರೆ, ಈ ಸಾಲಿನಲ್ಲಿ ಜೋಳ ಬಿತ್ತನೆ ಮಾಡುವ ಸಂದರ್ಭ ಮಳೆ ಬಾರದೆ ಸಂಕಷ್ಟದಲ್ಲಿದ್ದ ರೈತರು ಬಿತ್ತನೆ ಮಾಡಿದ ಜೋಳದ ಬೆಳೆಯು ಅರ್ಧದಷ್ಟು ಹುಟ್ಟಿ ಈಗಾಗಲೇ ಕಟಾವಿಗೆ ಬಂದಿದೆ. ಕಟವು ಮಾಡಿ ಮಾರಾಟ ಮಾಡುವ ಹಂತದಲ್ಲಿ ಅಕಾಲಿಕ ಮಳೆಯು ಕಳೆದ 15 ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವದರಿಂದ ಜೋಳ ನೆಲಕ್ಕುರುಳಿವೆ. ನೆಲಕ್ಕುರುಳಿರುವ ಜೋಳದ ಕಾಳುಗಳು ಮಳೆಯಿಂದ ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಜೋಳದ ತೂಕವು ಕಡಿಮೆಯಾಗುತ್ತಿದೆ. ಹಾಗೂ ಮೊಳಕೆ ಬಂದ ಜೋಳವನ್ನು ವ್ಯಾಪಾರಿಗಳು ಖರೀದಿಸಲು ಮುಂದಾಗದೆ ಮಳೆಯಿಂದ ದೊಡ್ಡ ನಷ್ಟವಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ಎಂದು ಈ ಭಾಗದ ರೈತರು ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ.
ವಾಣಿಜ್ಯ ಬೆಳೆಯಾದ ಶುಂಠಿ ಬೆಳೆದ ರೈತರು, ಇದೀಗ ಆ ಬೆಳೆಯು ಕಡ್ಡಿ ರೋಗ ಮತ್ತು ಕೊಳೆರೋಗಗಳು ಹೆಚ್ಚಾಗಿ ಶುಂಠಿಯ ಸಾಲುಗಳು ರೋಗದ ಶುಂಠಿಯಾಗಿ ಕಿತ್ತೆಸೆಯುವ ಪ್ರಸಂಗ ಎದುರಾಗಿದೆ. ಪ್ರಕೃತಿಯ ವಿಕೋಪದಿಂದ ರೈತರು ನಷ್ಟದಲ್ಲಿ ಸಿಲುಕಿದ್ದಾರೆ. -ಕೆ.ಕೆ.ನಾಗರಾಜಶೆಟ್ಟಿ