ಮಡಿಕೇರಿ, ಅ. 2: ಕರ್ನಾಟಕ ಸರಕಾರವು ಬ್ಯಾರಿ ಭಾಷೆಗೆ ಅಧಿಕೃತ ಮನ್ನಣೆ ನೀಡಿದ ಅಕ್ಟೋಬರ್ 3ನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸುತ್ತಿದೆ.

ಬ್ಯಾರಿ ಭಾಷೆ ಮಾತನಾಡುವ ಸುಮಾರು 20 ಲಕ್ಷಕ್ಕೂ ಮೇಲ್ಪಟ್ಟ ಜನರಿದ್ದು, ಬ್ಯಾರಿ ಭಾಷೆಯ ಮೇಲೆ ಸಾರ್ವಜನಿಕರಲ್ಲಿ ಮತ್ತು ಸಮುದಾಯದವರಲ್ಲಿ ಅಭಿಮಾನ ಮೂಡಿಸುವ ಸಲುವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ತಾ.3ರಂದು (ಇಂದು) ಮಂಗಳೂರಿನ ಟೌನ್‍ಹಾಲ್‍ನಲ್ಲಿ ಬ್ಯಾರಿ ಭಾಷಾ ದಿನವನ್ನು ಆಚರಿಸಲಾಗುವದು.

ಭಾಷಾ ಸಾಹಿತ್ಯ ಅಕಾಡೆಮಿಗಳ ಪ್ರಥಮ ಆದ್ಯತೆ ಆಯಾಯ ಭಾಷೆಗಳ ಅಭಿವೃದ್ಧಿ, ಸಾಹಿತ್ಯದ ಬೆಳವಣಿಗೆ, ಅಧ್ಯಯನಕ್ಕೆ ಪ್ರೋತ್ಸಾಹ ಹಾಗೂ ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿ ಈ ದಿಸೆಯಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಈಗಾಗಲೇ ಹಲವು ಬ್ಯಾರಿ ಪುಸ್ತಕಗಳು ಹಾಗೂ ಸಿ.ಡಿ.ಗಳ ಅನಾವರಣ, ಬ್ಯಾರಿ ಸಾಹಿತಿಗಳಿಗೆ ಅಭಿನಂದನೆ, ಬ್ಯಾರಿ ಭಾಷೆಯಲ್ಲಿ ವಿವಿಧ ಸ್ಪರ್ಧೆ, ದಫ್ ತಂಡಗಳಿಗೆ ದಫ್ ಪರಿಕರ ಹಾಗೂ ಸಮವಸ್ತ್ರ ವಿತರಣೆ, ಸಾಂಸ್ಕøತಿಕ ಚಟುವಟಿಕೆಗಳು ಮೊದಲಾದ ಕಾರ್ಯಕ್ರಮಗಳೊಂದಿಗೆ ಹೊರಜಿಲ್ಲೆ ಹಾಗೂ ವಿದೇಶಗಳಲ್ಲೂ ಬ್ಯಾರಿ ಭಾಷಾ ದಿನಾಚರಣೆ ನಡೆಸಲಾಗಿದೆ. ಅದರಂತೆ 2017ರ ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನವನ್ನಾಗಿಯೂ, ಅಕ್ಟೋಬರ್ 3ರಿಂದ ಬ್ಯಾರಿ ಪುಸ್ತಕ ಮಾರಾಟ ಮತ್ತು ಪ್ರಚಾರ ಅಭಿಯಾನ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬ್ಯಾರಿ ಭಾಷಾ ದಿನಾಚರಣೆಯ ಸಲುವಾಗಿ ಬ್ಯಾರಿ ಸಂಘಟನೆಗಳು ಮತ್ತು ಶಾಲಾ - ಕಾಲೇಜುಗಳು ಬ್ಯಾರಿ ಭಾಷೆಯಲ್ಲಿ ಪ್ರಬಂಧ, ಚುಟುಕು, ಗಾದೆ, ಓದುವ ಸ್ಪರ್ಧೆ, ಗಾಯನ ಸ್ಪರ್ಧೆ, ಬ್ಯಾರಿ ಪುಸ್ತಕ ಬಿಡುಗಡೆ, ಬ್ಯಾರಿ ಕಾವ್ಯಗಾಯನ, ಗೋಷ್ಠಿ ಮುಂತಾದ ಭಾಷಾ ಬೆಳವಣಿಗೆಗೆ ಪೂರಕವಾದ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಬ್ಯಾರಿ ಭಾಷೆಯು ದ್ರಾವಿಡ ಭಾಷೆಗಳ ಪೈಕಿ ಒಂದು ಸ್ವತಂತ್ರ ಭಾಷೆಯಾಗಿದ್ದು, ಸಮೃದ್ಧ ಭಾಷೆಯಾಗಿದೆ. ಬ್ಯಾರಿ ಭಾಷೆಯನ್ನು ಸಾಹಿತ್ಯ ಭಾಷೆಯಾಗಿ ಇನ್ನಷ್ಟು ಬೆಳೆಸುವದಲ್ಲದೆ, ಈ ಭಾಷೆಯನ್ನು ಇನ್ನಷ್ಟು ಹೆಚ್ಚು ಮಂದಿ ಮಾತನಾಡುವಂತೆ ಪ್ರೇರೇಪಿಸಬೇಕಾಗಿದೆ. ಈ ದಿಸೆಯಲ್ಲಿ ಸಂಘ- ಸಂಸ್ಥೆಗಳು ದೇಶ- ವಿದೇಶಗಳಲ್ಲಿ ತಾ. 3ರಂದು (ಇಂದು) ಬ್ಯಾರಿ ಭಾಷಾ ದಿನಾಚರಣೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬ್ಯಾರಿ ಭಾಷೆಯ ಹಲವು ಕಾರ್ಯಕ್ರಮಗಳನ್ನು ನಡೆಸಿ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಸುವಂತೆ ಕರ್ನಾಟಕ ಬ್ಯಾರಿ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ ತಿಳಿಸಿದ್ದಾರೆ.