ನಾಪೆÇೀಕ್ಲು, ಅ. 3: ಕೊಡಗು ಜಿಲ್ಲೆ ಪ್ರವಾಸಿಗರ ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದೆ. ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಜಿಲ್ಲೆಯ ಸುಂದರ ಪರಿಸರ, ವಾತಾವರಣ, ಜಲಪಾತಗಳು, ಆಹಾರ ವೈವಿಧ್ಯ ಎಲ್ಲವೂ ಪ್ರವಾಸಿಗರಿಗೆ ಅತ್ಯಂತ ಪ್ರಿಯ. ಆದರೆ ಇದೆಲ್ಲದರ ನಿರೀಕ್ಷೆ ಯಿಂದ ಬರುತ್ತಿರುವ ಪ್ರವಾಸಿಗರ ಜೀವಕ್ಕೆ ಇಲ್ಲಿ ರಕ್ಷಣೆಯಿಲ್ಲದಂತಾದರೆ, ಪ್ರವಾಸಿಗರು ಇತ್ತ ಸುಳಿಯಲು ಸಾಧ್ಯವೇ?
ಇದಕ್ಕೆ ಉದಾಹರಣೆ ಪ್ರವಾಸಿಗರ ನೆಚ್ಚಿನ ತಾಣವಾದ ಚೇಲಾವರ ಜಲಪಾತ. ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆಯಿಂದ ಸುಮಾರು 3 ಕಿ.ಮೀ. ಸಾಗಿದರೆ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಸುತ್ತಲ ವನರಾಶಿ, ಮುಗಿಲೆತ್ತರದ ಬೆಟ್ಟಗಳು, ನಡುವೆ ಬೆಳ್ನೂರೆಯುಕ್ಕಿಸುತಾ, ಭೋರ್ಗರೆಯುತ್ತಾ, ರಭಸದಿಂದ ಹರಿಯುತ್ತಿರುವ ಜಲಪಾತ, ಆಳ ಪ್ರಪಾತ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೆಕೆನ್ನುವ ರುದ್ರರಮಣೀಯ ಸುಂದರ ದೃಶ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಳೆಗಾಲದ ಆರಂಭದಲ್ಲಿ, ರಜಾದಿನಗಳಲ್ಲಿ ಇಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಇಲ್ಲಿ ಜಲ ಕ್ರೀಡೆಯಾಡುವವರು, ಬೇಡವೆನ್ನು ವವರು, ಎಲ್ಲರಿಗೂ ಏನೋ ಉತ್ಸಾಹ, ಸಂಭ್ರಮ. ಆದರೆ ಯಾರಿಗೂ ಇಲ್ಲಿನ ಅಪಾಯದ ಅರಿವು ಇಲ್ಲ. ನೀರಿಗಿಳಿದವರಲ್ಲಿ ಒಂದಿಬ್ಬರು ಅಂತರ್ಗತವಾದಾಗ ವಾಸ್ತವದ, ಅಪಾಯದ ಅರಿವಾ ಗುತ್ತದೆ. ಅಷ್ಟರಲ್ಲಿ ಅಮಾಯಕರ ಪ್ರಾಣ ಬಲಿ ನಡೆದಿರುತ್ತದೆ. ಇಲ್ಲಿಯವರೆಗೆ ಅಲ್ಲಿ ನಡೆದದ್ದು ಹಾಗೆಯೇ. ಚೇಲಾವರ ಜಲಪಾತದ ಇತಿಹಾಸದಲ್ಲಿ ‘ಶಕ್ತಿ’ಗೆ ಲಭಿಸಿರುವ ಅಧಿಕೃತ ಮಾಹಿತಿ ಪ್ರಕಾರ ಇಲ್ಲಿ ಪ್ರಾಣಕಳೆದುಕೊಂಡವರು ಬರೋಬರಿ 15 ಮಂದಿ. ಕಳೆದ ಎರಡು ವರ್ಷಗಳಲ್ಲಿ 9 ಜನ ಇಲ್ಲಿ ಯಮಸದನ ಸೇರಿದ್ದಾರೆ.
ಚಂದಕ್ಕೆ ಮರುಳಾಗದಿರಿ: ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತೊಂದಿದೆ. ಅದಕ್ಕೆ ಪೂರಕವಾಗಿದೆ ಚೇಲಾವರ ಜಲಪಾತ. ಹಾಲ್ನೊರೆ ಯಿಂದ ಉಕ್ಕಿ ಹರಿಯುವ ನೀರು ಎಲ್ಲರ ಮನಸೂರೆಗೊಳಿಸುವದು ಸತ್ಯ. ಆದರೆ ಸ್ಚಲ್ಪ ಎಚ್ಚರ ತಪ್ಪಿದರೂ ಯಮ ಸದನದ ಕದ ತಟ್ಟುವದು ಖಚಿತ. ಜಲಪಾತದ ಅರ್ಧ ಭಾಗದಲ್ಲಿ ಸುಮಾರು 40 ಅಡಿ ಆಳದ ಭಯಾನಕ ಗುಂಡಿಯೊಂದಿದೆ. ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂಧಿಯಲ್ಲಿ ಸಿಲುಕಿ ಈಜು ತಿಳಿದಿದ್ದರೂ ಮೇಲೆ ಬರಲಾಗದೆ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಮುಳುಗು ತಜ್ಞರು. ಇಲ್ಲಿ ಸತ್ತವರ ಮೃತ ದೇಹವನ್ನು ಹೊರ ತೆಗೆಯಲು ಅಗ್ನಿ ಶಾಮಕದಳ ಮತ್ತು ಸ್ಥಳೀಯರು ರಾತ್ರಿ ಹಗಲು ಪರದಾಡಿರುವದನ್ನು ಕೂಡ ಮರೆಯುವಂತಿಲ್ಲ.
ಆಳ ಹುಡುಕಿದ ಗ್ರಾಮಸ್ಥರು: ಸುಮಾರು 80 ಅಡಿ ಎತ್ತರದಿಂದ ಧುಮುಕುವ ಜಲಪಾತದ ಕೆಳ ಭಾಗದಲ್ಲಿ ಬಂಡೆಗಳಿಂದಾವೃತ್ತವಾದ ಬೃಹದಾಕಾರದ, ಭಯಾನಕ ಗುಂಡಿ ನಿರ್ಮಾಣಗೊಂಡಿದೆ. ನೀರಿರುವ ಸಂದರ್ಭದಲ್ಲಿ ಬರುವ ಪ್ರವಾಸಿಗರಿಗೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಅಪಾಯದ ಅರಿವಿಲ್ಲದೆ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ 2016ರಲ್ಲಿ ಜಲಪಾತಕ್ಕೆ ಮೇಲಿನಿಂದ ನೀರು ಹರಿದು ಬಾರದ ಕಾರಣ ಚೇಲಾವರ ಗ್ರಾಮದ 15 ಜನರ ತಂಡ ಜಲಪಾತದ ಗುಂಡಿಯ ಆಳ ಹಾಗೂ ಕೆಳಗಿನ ಪರಿಸ್ಥಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಇದರ ನೀರನ್ನು ಖಾಲಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು. ಅದರಂತೆ ಕಠಿಣ ದಾರಿಯಲ್ಲಿ ಡೀಸಲ್ ಪಂಪ್ ಹೊತ್ತೊಯ್ದು ಶ್ರಮ ವಹಿಸಿದರೂ ಅವರಿಗೆ ಕೇವಲ 20 ಅಡಿಗಳಷ್ಟು ನೀರನ್ನು ಮಾತ್ರ ಖಾಲಿ ಮಾಡಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಗುಂಡಿಯ ಕೆಳಭಾಗದ ದೃಶ್ಯ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಇಲ್ಲಿ ಮೋಜು ಹೆಚ್ಚು?: ಈ ಜಲಪಾತ ಪ್ರವಾಸಿಗರ ಸ್ವರ್ಗ ಎನ್ನಲಾಗುತ್ತಿದೆ. ಆದರೆ ಇಲ್ಲಿಗೆ ಮೋಜು ಮಾಡಲು ಆಗಮಿಸುವ ಪ್ರವಾಸಿಗರೇ ಹೆಚ್ಚು ಎನ್ನುವ ಮಾತುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಮೂರು ತರದ ಜನರಿದ್ದಾರೆ. ಸಂಸಾರಸ್ಥರು, ಮೊದಲು ಇಲ್ಲಿಗೆ ಭೇಟಿ ನೀಡುವವರು ಜಲಪಾತ ವೀಕ್ಷಿಸಿ ವಾಪಾಸಾಗುತ್ತಾರೆ. ಆದರೆ ಪಡ್ಡೆ ಹುಡುಗರು, ಯುವತಿಯರು ಜಲಕ್ರೀಡೆಯಾಡಲೆಂದೇ ಇಲ್ಲಿಗೆ ಬರುತ್ತಾರೆ. ಇವರಿಬ್ಬರಿಗೂ ಭಿನ್ನವಾದ ಒಂದು ತಂಡ ಇಲ್ಲಿಗೆ ಆಗಮಿಸುತ್ತದೆ. ಅವರಿಗೆ ಜಲಪಾತದ ಸೊಬಗು, ಜಲಕ್ರೀಡೆ ಯಾವದರ ಗೊಡವೆಯೂ ಇಲ್ಲ. ಜಲಪಾತದ ಮೆಲ್ಭಾಗದ ಬಂಡೆಗಳಲ್ಲಿ ಕುಳಿತು ಪಾನ ಪಾರ್ಟಿ ಮಾಡುತ್ತಿರುತ್ತಾರೆ. ತಾವು ಕುಡಿದು ಖಾಲಿಯಾದ ಖಾಲಿ ಶೀಶೆ ಎಲ್ಲೆಂದರಲ್ಲಿ ಹಾಕಿ, ಯುವತಿಯರು, ಮಹಿಳೆಯರು ಕಾಣಸಿಕ್ಕರೆ ವ್ಯಂಗ್ಯವಾಗಿ ಮಾತನಾಡುತ್ತಾ ತಮ್ಮದೇ ಪ್ರಪಂಚದಲ್ಲಿ ವಿವರಿಸುತ್ತಾರೆ. ಕಾಡಿನೊಳಗೆ ಏಕೆ? ಮುಖ್ಯ ರಸ್ತೆಯ ಬದಿಗಳಲ್ಲಿಯೂ ಖಾಲಿ ಶೀಶೆಗಳು ಬಿದ್ದಿರುವದು ಇದಕ್ಕೆ ಸಾಕ್ಷಿಯಾಗಿದೆ.
ಸಿಬ್ಬಂದಿ ಕೊರತೆ: ಇಲ್ಲಿ ಹಲವರ ಪ್ರಾಣ ಹರಣವಾದ ನಂತರ ಜಿಲ್ಲಾಡಳಿತ ಅರಣ್ಯ ಇಲಾಖೆಯ ಸಿಬ್ಬಂದಿ ನೇಮಿಸಿದೆ. ಆದರೆ ಸಿಬ್ಬಂದಿಗಳನ್ನು ದಸರಾ ಹಬ್ಬದ ಪ್ರಯುಕ್ತ ಬೇರೆಡೆಗೆ ನಿಯೋಜನೆ ಮಾಡಿದ ಸಂದರ್ಭದಲ್ಲಿಯೇ ಇಲ್ಲಿ ಅನಾಹುತ ಸಂಭವಿಸುವದು ಕಂಡುಬರುತ್ತಿದೆ. ಪ್ರತಿ ನಿತ್ಯ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ವಾಹನ ನಿಲುಗಡೆ, ಅವರ ವಿವರಗಳ ದಾಖಲು ಸೇರದಂತೆ ಜಲಪಾತದ ನೀರಿನಲ್ಲಿ ಚೆಲ್ಲಾಟವಾಡುವ ಜನರನ್ನೂ ಇವರು ಗಮನಿಸಬೇಕು. ಕಿಷ್ಕಿಂಧೆ, ಏರು, ತಗ್ಗು ದಾರಿಯಲ್ಲಿ ಜಲಪಾತಕ್ಕೆ ಒಂದು ಬಾರಿ ಪ್ರಯಾಣಿಸುವದೇ ಕಷ್ಟಕರ. ಆದರೆ ಇವರು ದಿನದಲ್ಲಿ ಹಲವು ಸಲ ಇಲ್ಲಿ ಸಂಚರಿಸಬೇಕು. ಅದರೊಂದಿಗೆ ಅವರಿಗೆ ಕೂರಲು ಮಳೆಯಿಂದ ರಕ್ಷಣೆ ಪಡೆಯಲು ಯಾವದೇ ಸೂಕ್ತ ಸ್ಥಳವಿಲ್ಲ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದರೆ ಸಂಜೆಯ ವರೆಗೆ ರಸ್ತೆಯಲ್ಲಿಯೇ ಇವರ ಕಾಯಕ. ಛತ್ರಿಯೇ ಇವರಿಗೆ ರಕ್ಷಣೆ. ಇವರೊಂದಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದಲ್ಲಿ ಪ್ರವಾಸಿಗರಿಗೆ ಸೂಕ್ತ ಮಾಹಿತಿ, ರಕ್ಷಣೆ ನೀಡಲು ಸಾಧ್ಯವಾಗಬಹುದು ಎಂಬದು ಪ್ರವಾಸಿಗರ ಅಭಿಪ್ರಾಯ.
ಶುಲ್ಕವೂ - ಸೌಲಭ್ಯ ಇಲ್ಲ: ಎಲ್ಲಾ ಪ್ರವಾಸಿ ಕೇಂದ್ರಗಳಲ್ಲಿ ವಾಹನಗಳಿಗೆ ಶುಲ್ಕ. ಪ್ರವಾಸಿಗರಿಗೆ ಒಳ ಪ್ರವೇಶಿಸಲು ಟಿಕೆಟ್ ಪಡೆಯಬೇಕಾದ ವ್ಯವಸ್ಥೆ ಇದೆ. ಆದರೆ ಇಲ್ಲಿ ಯಾವ ಶುಲ್ಕವೂ ಇಲ್ಲ. ಸೌಲಭ್ಯವೂ ಇಲ್ಲ ಎಂಬಂತಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 3.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಆದರೆ ಯಾವದೇ ಮೂಲ ಭೂತ ಸೌಲಭ್ಯವನ್ನು ಒದಗಿಸಲಾಗಿಲ್ಲ ಎಂಬದು ಪ್ರವಾಸಿಗರ ದೂರು.
ಸ್ಥಳೀಯರೊಂದಿಗೆ ಸಂಘರ್ಷ: ಪ್ರವಾಸಿಗರು ನೀರಿಗಿಳಿದು ಆಟವಾಡುವದು, ಅಪಾಯದ ಸ್ಥಳಗಳಲ್ಲಿ ಸಂಚರಿಸುವದರ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆಕ್ಷೇಪವ್ಯಕ್ತಪಡಿಸಿದರೆ ಪ್ರವಾಸಿಗರೇ ಗ್ರಾಮಸ್ಥರೊಂದಿಗೆ ಜಗಳಕ್ಕಿಳಿಯುವ, ಪೆÇಲೀಸರಿಗೆ ದೂರು ನೀಡುವ ಬೆದರಿಕೆ ಹಾಕುತ್ತಿರುವದಾಗಿ ಸ್ಥಳೀಯರು ಬೇಸರವ್ಯಕ್ತಪಡಿಸುತ್ತಾರೆ.
ಇಲ್ಲಿನ ಪ್ರಾಣ ಹಾನಿ, ಸಮಸ್ಯೆಗಳ ಬಗ್ಗೆ `ಶಕ್ತಿ’ ಹಲವು ಬಾರಿ ಸಮಗ್ರ ವರದಿ ಪ್ರಕಟಿಸಿದರೂ ಸಿಬ್ಬಂದಿ ನೇಮಕ ಹೊರತು ಪಡಿಸಿ ಯಾವದೇ ಬದಲಾವಣೆಯಾಗಿಲ್ಲ. “ಪ್ರವಾಸಿಗರೇ ನಿಮ್ಮ ಜೀವ ನಿಮ್ಮಲ್ಲಿದೆ. ರಕ್ಷಣೆಯೂ ನಿಮ್ಮ ಕೈಯಲ್ಲಿದೆ. ಅತಿರೇಖದಿಂದ ಹದ್ದು ಮೀರಿ ವರ್ತಿಸಿದರೆ ನಿಮ್ಮನ್ನು ಆ ದೇವರು ಕೂಡ ರಕ್ಷಿಸಲಾರ ಜೋಕೆ...”
ಸಾರ್ವಜನಿಕರ ಆಕ್ರೋಶ: 2016 ರಲ್ಲಿ ಇಬ್ಬರು ಯುವಕರು ಜಲಪಾತದಲ್ಲಿ ಮೃತರಾದ ಸಂದರ್ಭ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸ್ಥಳೀಯ ಪಂಚಾಯಿತಿ, ಜನಪ್ರತಿನಿಧಿ ಗಳು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದ್ದರು. ಅದರಂತೆ ಪ್ರವಾಸೋಧ್ಯಮ ಇಲಾಖಾ ವತಿಯಿಂದ ಜಲಪಾತದ ಗುಂಡಿಯನ್ನು ಕಲ್ಲುಗಳಿಂದ ಮುಚ್ಚುವ ಕಾರ್ಯಕೈಗೊಳ್ಳಲಾಯಿತು. ಆದರೆ ಅದನ್ನು ಅರ್ಧಕ್ಕೆ ನಿಲ್ಲಿಸಿರುವದು ಅನಾಹುತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.