ಸೋಮವಾರಪೇಟೆ,ಅ.2: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಹೊಗೆಮುಕ್ತ ಗ್ರಾಮವನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಿರುವದು ಶ್ಲಾಘನೀಯ. ಈ ಸಂಕಲ್ಪಕ್ಕೆ ದೇಶವಾಸಿ ಗಳೆಲ್ಲರೂ ಕೈಜೋಡಿಸಬೇಕೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.

ಮಾದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಿಸಿ ಅವರು ಮಾತನಾಡಿದರು.

ದೇಶದ ಮಹಿಳೆಯರ ಆರೋಗ್ಯವನ್ನು ಮನಗಂಡು ಪ್ರಧಾನಿ ಮೋದಿಯವರು ಉಚಿತ ಗ್ಯಾಸ್ ಸಂಪರ್ಕವನ್ನು ನೀಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಅವರ ವಿಶೇಷ ಪ್ರಯತ್ನದಿಂದಾಗಿ ತಾಲೂಕಿಗೆ 6500 ಉಚಿತ ಗ್ಯಾಸ್ ಸಂಪರ್ಕಕ್ಕೆ ಅನುಮೋದನೆ ದೊರೆತಿದೆ. ಅದರಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ನೀಡಲಾಗುವದು ಎಂದರು.

ಮಾದಾಪುರ ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್ ಮಾತನಾಡಿ, ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಮಾದಾಪುರ ಗಾ.ಪಂ. ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ಹೆಚ್.ಎಂ. ಸೋಮಪ್ಪ, ಮಜೀದ್, ಪಾರ್ವತಿ ಹೆಚ್‍ಪಿ ಗ್ಯಾಸ್ ಏಜೆನ್ಸಿ ಮಾಲೀಕ ಎಸ್.ಎ.ಮುರಳೀಧರ್, ವ್ಯವಸ್ಥಾಪಕ ಎಂ.ಎಸ್.ಸತೀಶ್ ಮತ್ತಿತರರು ಯೋಜನೆಯ ಕುರಿತು ಮಾಹಿತಿ ನೀಡಿದರು.