ವೀರಾಜಪೇಟೆ, ಅ. 3: ಮುಂದಿನ ಚುನಾವಣೆಯಲ್ಲಿ ರಾಜ್ಯ ರಾಜಕೀಯವಾಗಿ ಮಹತ್ತರ ಬದಲಾವಣೆಯನ್ನು ಹೊಂದಲಿದೆ. ರಾಜ್ಯದ ಜನತೆ ಬದಲಾವಣೆಯನ್ನು ನಿರೀಕ್ಷಿಸಿದ್ದು ಸಾಮಾನ್ಯ ಜನರ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸರಕಾರವನ್ನು ಬಯಸಿದ್ದಾರೆ ಎಂದು ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಸಂಕೇತ್ ಪೂವಯ್ಯ ಮತದಾರರು ಸಂವಿಧಾನದ ನ್ಯಾಯಾಂಗ ಹಾಗೂ ಪತ್ರಿಕಾರಂಗದ ಮೇಲೆ ನಂಬಿಕೆ ಇಟ್ಟಿದ್ದಾರೆ. ಕೊಡಗಿನ ಶಾಸಕರು, ಸಂಸದರು ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೆ ನಿಷ್ಕ್ರೀಯವಾಗಿರುವದು. ನಾಲ್ಕು ವರ್ಷಗಳ ಅವಧಿಯಲ್ಲಿ 5 ಉಸ್ತುವಾರಿ ಸಚಿವರ ಬದಲಾವಣೆ, ಕೊಡಗಿನಲ್ಲಿಯೂ ರೈತರ ನಿರಂತರ ಆತ್ಮಹತ್ಯೆ ಪ್ರಕರಣಗಳು, ಡಿ.ವೈ.ಎಸ್ಪಿ. ಗಣಪತಿ ಆತ್ಮಹತ್ಯೆಯಿಂದ ಜನತೆ ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಕಾರ್ಯಕರ್ತರ ಸಭೆಯ ನ್ನುದ್ದೇಶಿಸಿ ಪಕ್ಷದ ರಾಜ್ಯ ಸಮಿತಿಯ ಎಸ್.ಹೆಚ್. ಮೈನುದ್ದೀನ್, ನಾಪೋಕ್ಲುವಿನ ಮನ್ಸೂರ್ ಆಲಿ, ಜಿಲ್ಲೆಯ ಅಲ್ಪ ಸಂಖ್ಯಾತರ ಘಟಕದ ಐಸಾಕ್, ಪಿ.ಎ. ಮಂಜುನಾಥ್ ಸಿದ್ದಾ ಪುರದ ಯಮುನಾ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತ ನಾಡಿದರು. ಇಲ್ಲಿನ ಪುರಭವನದಲ್ಲಿ ನಡೆದ ಸಭೆಯಲ್ಲಿ ಗಾಂಧಿನಗರದ ಪಿ.ಎ. ಮಂಜುನಾಥ್ ಬೆಂಬಲಿಗ ರೊಂದಿಗೆ ಪಕ್ಷ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮರಿಯಾ ಸಿಕ್ವೇರಾ, ರಷೀದ್, ಹೆಚ್.ಕೆ. ಗೋಪಾಲ್ ಅಮ್ಮತ್ತಿಯ ಪಂಚಾಯಿತಿ ಸದಸ್ಯೆ ಹೆಚ್.ಕೆ. ಜಯ, ವೀರಾಜಪೇಟೆ ಪಂಚಾಯಿತಿ ಸದಸ್ಯೆ ನಾಗಮ್ಮ, ಸಿ.ಎ. ನಾಸೀರ್ ಉಪಸ್ಥಿತರಿದ್ದರು. ಪಕ್ಷದ ಕಾರ್ಯಕರ್ತರುಗಳಾದ ಆರ್.ಎ. ಸಕ್ಲೇನ್, ಪಿ.ವಿ. ರೆನ್ನಿ. ಎಂ.ಜಿ. ಫಾಹೀಂ, ಯಾಶೀರ್ ಅಹಮ್ಮದ್, ಮನ್ಸೂರ್, ಅಶ್ರಫ್ ಆಲಿ ಹಾಜರಿದ್ದರು. ತಾಲೂಕಿನ ವಿವಿಧೆಡೆಗಳಿಂದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.