ಸಿದ್ದಾಪುರ, ಅ. 2: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಏಕೈಕ ವೈದ್ಯರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಎಸ್‍ಡಿಪಿಐ ಸಿದ್ದಾಪುರ ಘಟಕ ಖಂಡಿಸಿದ್ದು, ವೈದ್ಯರ ವರ್ಗಾವಣೆಯನ್ನು ಹಿಂಪಡೆಯದಿದ್ದರೆ ಹೋರಾಟ ನಡೆಸುವದಾಗಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸಿದ್ದಾಪುರ ಘಟಕದ ಅಧ್ಯಕ್ಷ ಎ.ಪಿ ಶಾಹುಲ್ ಮಾತನಾಡಿ, ಕಾರ್ಮಿಕರು ಮತ್ತು ಬಡವರು ಹೆಚ್ಚಾಗಿರುವ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಸೇರಿದಂತೆ ವಿವಿಧ ಗ್ರಾಮಗಳ 25 ಸಾವಿರಕ್ಕೂ ಹೆಚ್ಚು ಜನರಿಗಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಏಕೈಕ ವೈದ್ಯರನ್ನು ವರ್ಗಾಯಿಸಿರುವ ಸರಕಾರದ ಕ್ರಮ ಅತ್ಯಂತ ಖಂಡನೀಯ. 6 ವೈದ್ಯರುಗಳಿರಬೇಕಾದ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ವೈದ್ಯರು ಕರ್ತವ್ಯದಲ್ಲಿದ್ದು, ಪ್ರತಿ ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿರುವ ನೂರಾರು ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ವರ್ಗಾವಣೆಯನ್ನು ರದ್ದುಗೊಳಿಸುವದರೊಂದಿಗೆ ಹೆಚ್ಚುವರಿ ವೈದ್ಯರನ್ನು ನೇಮಿಸಲು ಸರಕಾರ ಮುಂದಾಗಬೇಕೆಂದರು.

ಗೋಷ್ಠಿಯಲ್ಲಿ ಗ್ರಾ.ಪ ಸದಸ್ಯ ಹುಸೈನ್, ಶೌಕತ್ ಅಲಿ ಮತ್ತು ಪಕ್ಷದ ಕಾರ್ಯದರ್ಶಿ ಹನೀಫ್ ಇದ್ದರು.