ಮಡಿಕೇರಿ, ಅ. 2: ಕೊಡವ ಜನಾಂಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಹಲವಾರು ಸಾಧಕರು ಇದ್ದಾರೆ. ಆದರೆ ಹಲವರ ಸೇವೆ-ಸಾಧನೆ ಎಲ್ಲರಿಗೂ ಅರಿವಾಗುತ್ತಿಲ್ಲ. ವೈಯಕ್ತಿಕವಾಗಿ ಯಾವದೇ ಸಾಧನೆಗಳು ಇರಬಹುದು. ಇದು ತಾಯಿ ನಾಡು ಕೊಡಗು ಹಾಗೂ ಕೊಡವ ಜನಾಂಗಕ್ಕೂ ಪೂರಕವಾದ ಪ್ರೇರಣೆ-ಕೊಡುಗೆಯಾಗಬೇಕು ಎಂದು ಹಿರಿಯರಾದ ಮಡಿಕೇರಿಯ ದೇಚೂರು ಕೊಡವ ಕೇರಿಯ ಕೊರವುಕಾರತಿ (ಮುಖ್ಯಸ್ಥೆ) ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಅವರು ಕರೆ ನೀಡಿದರು.

ಮಡಿಕೇರಿ ಕೊಡವ ಸಮಾಜದಲ್ಲಿ ಇಂದು ನಡೆದ ದೇಚೂರು ಕೊಡವ ಕೇರಿ ಸಂಘದ ‘ಕೈಲ್ ಪೊಳ್ದ್’ ಸಂತೋಷ ಕೂಟ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು, ನನ್ನದು, ನನ್ನಮನೆ ಎಂಬ ದೃಷ್ಟಿಕೋನ ಬದಲಾಗಬೇಕು. ಸಾಧನೆಗಳು ಇತರರಿಗೆ ಮಾರ್ಗದರ್ಶನ-ಪ್ರೇರಣೆ ದೊರಕುವಂತಾಗಬೇಕು. ಪೋಷಕರು ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕೇ ಹೊರತು ಇಂತಹದ್ದೇ ಕ್ಷೇತ್ರ ಎಂಬ ಆಯ್ಕೆಯನ್ನು ಹೇರಬಾರದು ಎಂದು ಅವರು ಸಲಹೆಯಿತ್ತರು.

ಕೇರಿಯ ಪದಾಧಿಕಾರಿ ಕುಂಞರ ಸೋಮಯ್ಯ (ಚೋಮುಣಿ) ಅವರು ಮಾತನಾಡಿ, ಕೇರಿ ಸಂಘದ ವತಿಯಿಂದ ಸದಸ್ಯರ ಒಳಿತು-ಕೆಡುಕುಗಳ ಬಗ್ಗೆ ಸ್ಪಂದಿಸಲಾಗುತ್ತಿದೆ. ಈ ರೀತಿಯಲ್ಲೇ ಪರಸ್ಪರ ಸಹಕಾರ-ಒಗ್ಗಟ್ಟು ಮುಂದುವರಿಯುವಂತಾಗ ಬೇಕು ಎಂದು ಆಶಿಸಿದರು.

ವಿಶೇಷ ಆಹ್ವಾನಿತರಾಗಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಅವರು ಜನಾಂಗದವರು ತಮ್ಮ ಪದ್ಧತಿ-ಹಬ್ಬಹರಿದಿನಗಳ ಆಚರಣೆಯನ್ನು ಹಿಂದಿನ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಆಚರಿಸಿಕೊಂಡು ಹೋಗಬೇಕಾದ ಅಗತ್ಯತೆ ಇರುವದಾಗಿ ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇರಿಯ ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಅವರು ಸಂಘದ ಚಟುವಟಿಕೆಗಳ ಕುರಿತು ಮಾಹಿತಿಯಿತ್ತರು. ಸಂಘದ ಅಭಿವೃದ್ಧಿಗೆ ಪಾಂಡಂಡ ಶಾರದ ಮಂದಪ್ಪ ಅವರು ರೂ. 1 ಲಕ್ಷ ಕೊಡುಗೆ ನೀಡಿರುವದನ್ನು ಅವರು ಈ ಸಂದರ್ಭ ತಿಳಿಸಿದರು.

ಇಂದಿರಾ ನಿಧನಕ್ಕೆ ಸಂತಾಪ

ಕೊಡಗಿನಲ್ಲಿ ಸಾವು ಸಂದರ್ಭ ನೀಡುವ ಗೌರವ-ಮಹತ್ವವನ್ನು ಅರಿತು ಮಡಿಕೇರಿ ಆಕಾಶವಾಣಿಯಲ್ಲಿ ನಿಧನ ಸುದ್ದಿ ಬಿತ್ತರ ಹಾಗೂ ಸುದ್ದಿ ಸಮಾಚಾರದಂತಹ ಕಾರ್ಯಕ್ರಮ ಪ್ರಸಾರಕ್ಕೆ ಕಾರಣಕರ್ತರಾದ ಮಡಿಕೇರಿ ಆಕಾಶವಾಣಿಯ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿ ಮೌನಾಚರಿಸಲಾಯಿತು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಆಯುಧ ಪೂಜೆಯೊಂದಿಗೆ ಸಂತೋಷ ಕೂಟಕ್ಕೆ ಚಾಲನೆ ನೀಡಲಾಯಿತು. ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.

ಉಪಾಧ್ಯಕ್ಷೆ ಕೂಪದಿರ ಸುಂದರಿ ಮಾಚಯ್ಯ, ಕೇರಿಯ ಮುಖ್ಯಸ್ಥ ಡಾ. ಕೋದಂಡ ದೇವಯ್ಯ, ಕಾರ್ಯದರ್ಶಿ ಮೇವಡ ನಾಣಯ್ಯ, ಆಕಾಶವಾಣಿ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಚೇನಂಡ ರಕ್ಷಾ ಮುತ್ತಪ್ಪ ಪ್ರಾರ್ಥಿಸಿ, ಬೊಳಂದಂಡ ಅಪ್ಪಣ್ಣ ಸ್ವಾಗತಿಸಿದರು. ಕೂಪದಿರ ಶಾರದಾ ನಂಜಪ್ಪ ಕಾರ್ಯಕ್ರಮ ನಿರೂಪಿಸಿ ಮೇವಡ ನಾಣಯ್ಯ ವಂದಿಸಿದರು. ಪಳಂಗಡ ಸವಿತಾ ಪ್ರಸಾದ್ ಬಹುಮಾನ ವಿಜೇತರ ವಿವರ ನೀಡಿದರು.