ಕೂಡಿಗೆ, ಅ. 3: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಐದನೇ ವರ್ಷದ ಶತಚಂಡಿ ಯಾಗ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸಿದ್ದಲಿಂಗಪುರದ ನಾಪಂಡ ಬೋಜಮ್ಮ ಮತ್ತು ಕುಟುಂಬದವರು ಆಯೋಜಿಸಿದ್ದ ಶತಚಂಡಿಯಾಗ ಮರ್ಕಂಜ ಯೋಗೀಶ್ವರ ಮಠದ ಶ್ರೀ ರಾಜೇಶ್‍ನಾಥ್‍ಜೀ ಆಶೀರ್ವಾದದೊಂದಿಗೆ, ನರೇಂದ್ರನಾಥ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀನಿವಾಸ್ ಭಾಯರಿ ಪ್ರಧಾನ ಆಚಾರ್ಯತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಹೋಮ ಹವನಗಳ ನಡೆದವು.

ಶತಚಂಡಿಯಾಗದ ಕುಂಡಿಕೆಗೆ ವಿಶೇಷ ಪೂಜೆಯ ಜೊತೆಯಲ್ಲಿ ಪೂರ್ಣಾಹುತಿ, ಮಂತ್ರಾಕ್ಷತೆ, ಋತ್ವಿಕ ಸಂಭಾವನೆ ಸೇರಿದಂತೆ ಹಾಜರಿದ್ದ ಅರ್ಚಕರು ವಿಶೇಷವಾದ ಮಂತ್ರಘೋಷಗಳೊಂದಿಗೆ ಶತಚಂಡಿಯಾಗದ ಪೂಜಾ ಕಾರ್ಯ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನೆರವೇರಿತು.

ಯಾಗದ ಆಯೋಜಕ ನಾಪಂಡ ಮುತ್ತಪ್ಪ ಮಾತನಾಡಿ, ಕಳೆದ ಐದು ವರ್ಷಗಳಿಂದ ಶತಚಂಡಿಯಾಗವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಜನರಿಗೆ ಒಳಿತಾಗಲು ಹಾಗೂ ನಾಡಿನಲ್ಲಿ ಸುಭೀಕ್ಷವಾಗಿ ಎಲ್ಲಾ ಕಾರ್ಯಗಳು ನಡೆಯಲು ಇಂತಹ ಯಾಗಗಳು ಜಿಲ್ಲೆಗಳಲ್ಲಿ ನಡೆಯುವದರ ಮೂಲಕ ಗ್ರಾಮಗಳ ಅಭ್ಯೋದಯಕ್ಕೆ ಉಪಯೋಗವಾಗಲಿವೆ ಎಂದರು.

ಶತಚಂಡಿಯಾಗದಲ್ಲಿ ನಾಪಂಡ ಭೋಜಮ್ಮ ಕುಟುಂಬಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಬಾಣಾವರ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕುಶಾಲನಗರ ಸೇರಿದಂತೆ ಜಿಲ್ಲೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಮಹಾಮಂಗಳಾರತಿ ನಂತರ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲೆಯ ವಿವಿಧ ಪಕ್ಷದ ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.