ಸೋಮವಾರಪೇಟೆ, ಅ. 3: ವೈದ್ಯರ ಕೊರತೆಯಿಂದ ನಲುಗುತ್ತಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ನೂತನವಾಗಿ ಸ್ತ್ರೀ ರೋಗ ತಜ್ಞರನ್ನು ನೇಮಿಸಿದ್ದು, ವೈದ್ಯ ಶಿವಪ್ರಸಾದ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಳೆದ ಹಲವು ಸಮಯದಿಂದ ಈ ಆಸ್ಪತ್ರೆಯಲ್ಲಿ ಕೇವಲ ಮೂವರು ವೈದ್ಯರು ಮಾತ್ರ ಕಾರ್ಯನಿರ್ವ ಹಿಸುತ್ತಿದ್ದು, ಒಬ್ಬೊಬ್ಬರು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸ ಬೇಕಾದ ಅನಿವಾರ್ಯತೆ ಎದು ರಾಗಿತ್ತು. ಇದರೊಂದಿಗೆ ಆಸ್ಪತ್ರೆಯ ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ಕ್ಷುಲ್ಲಕ ಕಾರಣಗಳಿಗೆ ತಗಾದೆ ತೆಗೆದು ಹಲ್ಲೆ ಯತ್ನದಂತಹ ಪ್ರಕರಣಗಳೂ ನಡೆಯುತ್ತಿದ್ದವು.

ಇದರಿಂದಾಗಿ ಯಾವೊಬ್ಬ ವೈದ್ಯರೂ ಸಹ ಈ ಆಸ್ಪತ್ರೆಯತ್ತ ಮುಖ ಮಾಡುತ್ತಿರಲಿಲ್ಲ. ಇರುವ ವೈದ್ಯರೂ ಸಹ ಬೇರೆಡೆಗೆ ವರ್ಗ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ವೈದ್ಯರ ಕೊರತೆ, ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆ ಕರ್ತವ್ಯ ನಿರ್ವಹಿಸುವದೇ ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲೂ ಮೂಳೆ ತಜ್ಞ ಡಾ. ಶರತ್‍ಬಾಬು, ಮಕ್ಕಳ ತಜ್ಞ ಜಶ್ವಂತ್, ಕಿವಿ ಮೂಗು ಗಂಟಲು ತಜ್ಞೆಯಾದ ಡಾ. ದೇವಿಕಾ ಅವರುಗಳೇ ಎಲ್ಲಾ ಖಾಯಿಲೆಗಳಿಗೂ ಉಪಚರಿಸಬೇಕಾದ ಸಂದಿಗ್ಧತೆ ಸೃಷ್ಟಿಯಾಗಿತ್ತು.

ಇದೀಗ ನೂತನವಾಗಿ ಸ್ತ್ರೀ ರೋಗ ತಜ್ಞ ಡಾ. ಶಿವಪ್ರಸಾದ್ ಅವರನ್ನು ಸರ್ಕಾರ ನೇಮಿಸಿದ್ದು, ಇವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹೂ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಹಿಂದೆ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಂತೆ ಆಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು, ವೈದ್ಯರ ನೇಮಕವಾದ ಹಿನ್ನೆಲೆ ಆಸ್ಪತ್ರೆಗೆ ತೆರಳಿ ನೂತನ ವೈದ್ಯರನ್ನು ಅಭಿನಂದಿಸಿದರು.

ಈ ಸಂದರ್ಭ ಮಾತನಾಡಿದ ಡಾ. ಶಿವಪ್ರಸಾದ್, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇನ್ನೂ ಇದ್ದು, 13 ವೈದ್ಯರಿರಬೇಕಾದ ಸ್ಥಳದಲ್ಲಿ ಕೇವಲ ನಾಲ್ವರು ಮಾತ್ರ ಇದ್ದೇವೆ. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲು ನಾವುಗಳು ಸಿದ್ದರಿದ್ದು, ಸಾರ್ವಜನಿಕರೂ ಸಹ ಪರಿಸ್ಥಿತಿಯನ್ನು ಅರಿತುಕೊಂಡು ಆಸ್ಪತ್ರೆಯ ವೈದ್ಯರೊಂದಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ನಗರಾಧ್ಯಕ್ಷ ಮಂಜುನಾಥ್, ಕಾರ್ಯ ದರ್ಶಿ ರವೀಶ್, ಪದಾಧಿಕಾರಿಗಳಾದ ಅಬ್ಬಾಸ್, ಇಸ್ಮಾಯಿಲ್, ಅಬ್ದುಲ್ ಸಲಾಂ, ಸಂತೋಷ್, ದೀಪಕ್, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದು, ವೈದ್ಯರನ್ನು ಸ್ವಾಗತಿಸಿದರು.