ಮಡಿಕೇರಿ, ಅ. 2: ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡದೆ ಆಂಗ್ಲ ಫಲಕಗಳನ್ನು ಅಳವಡಿಸಿರುವದನ್ನು ತೆರವುಗೊಳಿ ಸುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಮಾರುಕಟ್ಟೆ ವ್ಯಾಪಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.ಈ ಸಂದರ್ಭ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲೆಯಾದ್ಯಂತ ಆಂಗ್ಲ ಭಾಷಾ ಫಲಕಗಳು ರಾರಾಜಿಸುತ್ತಿವೆ. ರಾಜ್ಯ ಸರಕಾರದ ಆದೇಶಾನುಸಾರ ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದಿದ್ದರೂ ಇದು ಜಾರಿಯಾಗುತ್ತಿಲ್ಲ. ಈ ಬಗ್ಗೆ ಎರಡು ಬಾರಿ ಕೆಡಿಪಿ ಸಭೆಗಳಲ್ಲಿ ಗಮನ ಸೆಳೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ಅಧಿಕಾರಿಗಳಿಂದ ಈ ಕೆಲಸವಾಗಬೇಕಿದ್ದು, ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು.
ಕೆಡಿಪಿ ಸಭೆಯಲ್ಲಿ ತಾ. 20 ರವರೆಗೆ ಗಡುವು ನೀಡಲಾಗಿದ್ದರೂ, ಯಾವದೇ ಕ್ರಮ ಜರುಗದ ಹಿನ್ನೆಲೆಯಲ್ಲಿ ಧರಣಿ ಹಮ್ಮಿಕೊಳ್ಳ ಲಾಗಿದೆ. ಇನ್ನಾದರೂ ಜಿಲ್ಲಾಧಿಕಾರಿ ಗಳು ಇತ್ತ ಗಮನ ಹರಿಸಿ ಅಧಿಕಾರಿ ಗಳಿಗೆ ಸೂಚನೆ ನೀಡಿ ಕ್ರಮಕ್ಕೆ ಮುಂದಾಗದಿದ್ದರೆ
(ಮೊದಲ ಪುಟದಿಂದ) ಮುಂದಿನ ದಿನಗಳಲ್ಲಿ ಪರಿಷತ್‍ನಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಾಮಫಲಕ ತೆರವಿಗೆ ಮುಂದಾಗುವದಾಗಿ ಎಚ್ಚರಿಸಿದರು. ಈ ಸಂದರ್ಭ ಸಂಘರ್ಷ ಉಂಟಾದರೆ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ ಎಂದರು.
ಕರವೇ ಅಧ್ಯಕ್ಷ ಅಣ್ಣಯ್ಯ ಹಾಗೂ ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಕೃಷ್ಣ ಅವರುಗಳು ಮಾತನಾಡಿ, ಕೊಡಗಿನಲ್ಲಿ ಅನ್ಯ ಭಾಷೆಗಳ ನಾಮಫಲಕಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಸರಿಯಲ್ಲ. ಯಾವದೇ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಜಿಲ್ಲಾಡಳಿತಕ್ಕೆ ಇದು ಸಾಧ್ಯವಾಗದಿದ್ದಲ್ಲಿ ನಮಗಳಿಗೆ ಅಧಿಕಾರ ಕೊಡಿ ನಾವು ತೆರವುಗೊಳಿಸುತ್ತೇವೆ ಎಂದು ಹೇಳಿದರು.
ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಹಾಗೂ ಲೇಖಕಿ ಶೋಭಾ ಸುಬ್ಬಯ್ಯ ಅವರುಗಳು ಕನ್ನಡದ ತಾಯ್ನಾಡಿನಲ್ಲಿ ಕನ್ನಡ ನಶಿಸಿ ಹೋಗುತ್ತಿರುವದು ದುರಂತ. ಶಾಲಾ ಹಂತದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡ ಕಡ್ಡಾಯಗೊಳಿಸುವಂತಾಗಬೇಕು. ಕನ್ನಡವನ್ನು ದೂರ ಮಾಡುವದು ಹೆತ್ತ ತಾಯಿಯನ್ನು ದೂರ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿಗೆ ಆಗಮಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಈ ಹಿಂದೆ ಹಲವಾರು ಬಾರಿ ಪ್ರಯತ್ನಿಸಲಾಗಿದೆ. ಕಸಾಪ ಕನ್ನಡದ ಬಗ್ಗೆ ಧ್ವನಿಯೆತ್ತುವದರಲ್ಲಿ ಯಾವದೇ ತಪ್ಪಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದರು.
ಈ ಸಂಬಂಧ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಅವರ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಧರಣಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಸುಭಾಶ್ ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ನಿರ್ದೇಶಕರುಗಳಾದ ಪಿಲಿಫ್‍ವಾಸ್, ನಾಗರಾಜಶೆಟ್ಟಿ, ಎಸ್.ಪಿ. ಪ್ರಸನ್ನ, ಕಿಗ್ಗಾಲು ಗಿರೀಶ್, ತಾಲೂಕು ಮಾಜಿ ಅಧ್ಯಕ್ಷ ಬೇಬಿ ಮ್ಯಾಥ್ಯೂ, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್, ತಾಲೂಕು ಪದಾಧಿಕಾರಿ ಎಂ.ಬಿ. ಜೋಯಪ್ಪ, ಜಯ ಕರ್ನಾಟಕದ ಹಿದಾಯತ್ತುಲ್ಲ, ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಅಬ್ದುಲ್ ರಜಾಕ್, ಕಾವಲು ಪಡೆ ಮಹಿಳಾ ಘಟಕ ಅಧ್ಯಕ್ಷೆ ಲಲಿತ ಇನ್ನಿತರರು ಪಾಲ್ಗೊಂಡಿದ್ದರು.
ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಆಂಗ್ಲ ಮತ್ತು ಅನ್ಯ ಭಾಷೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು.
ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ದಾಳಿ ನಡೆಸಿ ಪಟ್ಟಣದ ಅಂಗಡಿ ಮುಂಗಟ್ಟುಗಳ ಮತ್ತು ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಕನ್ನಡ ಭಾಷೆಗೆ ಶೇ.50 ರಷ್ಟು ಆದ್ಯತೆ ನೀಡದ ಫಲಕಗಳಿಗೆ ಮಸಿ ಬಳಿಯುವದರೊಂದಿಗೆ ಹಾಗೂ ಶೇ.100 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡದ ಫಲಕಗಳನ್ನು ವಶಪಡಿಸಿಕೊಂಡು ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸೂಚನೆ ನೀಡಿದರು. ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಅಧ್ಯಕ್ಷ ಅಮೃತ್‍ರಾಜ್ ಅವರು ಫಲಕಗಳನ್ನು ಬದಲಾಯಿಸಲು 15 ದಿನಗಳ ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಕುಶಾಲನಗರ ಪ್ರವಾಸಿ ಮಂದಿರ ರಸ್ತೆಯ ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಆಂಗ್ಲ ಭಾಷೆಯಲ್ಲಿ ಫಲಕ ತೆರವುಗೊಳಿಸುವ ಸಂದರ್ಭ ಆಲಿ ಎಂಬ ವರ್ತಕರು ಅಧಿಕಾರಿಗಳೊಂದಿಗೆ ವಾದ ವಿವಾದಕ್ಕೆ ಇಳಿದ ಪ್ರಸಂಗವೂ ಕಂಡುಬಂತು. ನವೆಂಬರ್ 1 ರವರೆಗೆ ಅನ್ಯ ಭಾಷೆಗಳ ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿ ಸತೀಶ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕೆಲವು ವರ್ತಕರು ಕಾರ್ಯಾಚರಣೆ ಸಂದರ್ಭ ಆಂಗ್ಲ ಭಾಷೆಯಲ್ಲಿ ಇರುವ ಫಲಕಗಳನ್ನು ಸ್ವತಃ ತೆರವುಗೊಳಿಸಿದ ದೃಶ್ಯವೂ ಕಂಡುಬಂತು.