ಮಡಿಕೇರಿ, ಅ. 3: ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸಂಜೆಯಲ್ಲಿ ಆಯುಧಾ ಪೂಜೆ ಹಾಗೂ ದಸರಾದಂದು ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಗಮನ ಸೆಳೆದವು.
ಆಯುಧ ಪೂಜೆಯಂದು ಮಡಿಕೇರಿಯ ಕಲಾ ಬಳಗ ತಂಡ ಪ್ರದರ್ಶಿಸಿದ ನಾಡಿನ ವೀರ ಯೋಧನ ಜೀವನ ಚಿತ್ರಣವನ್ನೊಳಗೊಂಡ ‘ವೀರ ಚರಿತ್ರೆ’ ರೂಪಕ ಪ್ರೇಕ್ಷಕರ ಮನಸೂರೆಗೊಂಡಿತು. ವಿಭಿನ್ನವಾಗಿದ್ದ ಕಾರ್ಯಕ್ರಮ ಎಲ್ಲರನ್ನೂ ಭಾವಾನಾತ್ಮಕ ಲೋಕಕ್ಕೆ ಕೊಂಡೊಯ್ಯಿತ್ತಲ್ಲದೆ, ನೆರೆದಿದ್ದ ಸಹಸ್ರಾರು ಮಂದಿ ಕುಳಿತಲ್ಲಿಂದ ಎದ್ದು ಯೋಧರಿಗಾಗಿ ‘ಸಲಾಂ’ ಹೊಡೆದದ್ದು ವಿಶೇಷವಾಗಿತ್ತು.
ಮಡಿಕೇರಿಯ ಲೈಟ್-ಕ್ಯಾಮರಾ-ಡ್ಯಾನ್ಸ್ ಹೌಸ್ ತಂಡದಿಂದ ಹಿಪ್‍ಹಾಪ್ ಡ್ಯಾನ್ಸ್, ಆಟಿಟ್ಯುಡ್ ಡ್ಯಾನ್ಸ್ ತಂಡದಿಂದ ಡ್ಯಾನ್ಸ್ ಫೆಸ್ಟ್, ಗೋವಿಂದರಾಜ್, ವಿನಯ್, ದೇವೇಂದ್ರ ಪತ್ತರ್, ಸುವೇದಿತಾ, ನಿಶ್ಮಾ ಜಗದೀಶ್ ಅವರುಗಳಿಂದ ಗಾಯನ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ನೃತ್ಯ, ಬೆಂಗಳೂರಿನ ಡಿ ಕಂಪೆನಿಯಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಗಮನ ಸೆಳೆದವು.
ತಾ. 30ರ ದಸರಾದಂದು ಮಡಿಕೇರಿಯ ಎರಿಫ್ಲೆಕ್ಷನ್ ಡ್ಯಾನ್ಸ್ ಕ್ರೂ ತಂಡದಿಂದ ಫ್ಯೂಷನ್ ಡ್ಯಾನ್ಸ್, ಮೈಸೂರಿನ ತಾಂಡವಂ ಡ್ಯಾನ್ಸ್ ಡ್ರೂಪ್ ತಂಡದಿಂದ ನೃತ್ಯ ವೈವಿಧ್ಯ, ಕೊಡಗು ಗೌಡ ಯುವ ವೇದಿಕೆಯ ತಂಡ ಪ್ರಸ್ತುತಪಡಿಸಿದ ‘ಕೊಡಗ್‍ಲಿ ತುಲಾ ಸಂಕ್ರಮಣದ ವೈಭವ’ ನೃತ್ಯ ರೂಪಕ ಜನಮನ ಸೂರೆಗೊಂಡಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕದ ದರ್ಶನದ ಲೇಸರ್ ಶೋ, ವಿಕ್ರಮ್ ಜಾದೂಗಾರ್ ತಂಡದಿಂದ ಜಾದೂ ಪ್ರದರ್ಶನ, ಮಕ್ಕಳಿಂದ ಸ್ಕೇಟಿಂಗ್ ಡಾನ್ಸ್, ಮೈಸೂರಿನ ಗಣೇಶ ಮತ್ತು ತಂಡದಿಂದ ಕಂಸಾಳೆ, ಡೊಳ್ಳು ಕುಣಿತ ಪ್ರದರ್ಶಿತಗೊಂಡವು. ನಂತರ ಉಷಾ ಕೋಕಿಲ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.