ಕುಶಾಲನಗರ, ಅ. 2: ಶಿರಂಗಾಲದ ಸರಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಚಿಕ್ಕನಾಯಕನ ಹೊಸಳ್ಳಿಯಲ್ಲಿ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ ತಾ. 3ರಂದು (ಇಂದು) ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎನ್.ಸಿ. ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನದಿ ನೀರಿನ ಸದ್ಬಳಕೆ ಹಾಗೂ ಸ್ವಚ್ಚತೆಯಲ್ಲಿ ಯುವಕರ ಪಾತ್ರ ಎಂಬ ವಿಚಾರದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್ ವಿಚಾರ ಮಂಡಿಸಲಿದ್ದಾರೆ.
ತಾ. 4 ರಂದು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪೂರ್ಣಿಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಕರಾವಿಪ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ.
ತಾ. 5 ರಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ರಾಜು ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಯುವಕರ ಸದ್ಭಳಕೆ ಎಂಬ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾ. 6 ರಂದು ಗಾಂಧೀಜಿಯವರ ಕನಸಿನ ರಾಮರಾಜ್ಯ ಎಂಬ ವಿಷಯದ ಕುರಿತು ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ, ತಾ. 7 ರಂದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆಯ ಪಾತ್ರ ವಿಷಯದ ಕುರಿತು ಆಲೂರು ಸಿದ್ದಾಪುರದ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಶಿವಕುಮಾರ್ ವಿಷಯ ಮಂಡಿಸಲಿದ್ದಾರೆ. ತಾ. 8 ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.