ಶ್ರೀಮಂಗಲ, ಅ. 2: ವಿಯೆಟ್ನಾಮ್ ದೇಶದಿಂದ ಕರಿಮೆಣಸು ಆಮದು ಮಾಡಿ ಕೊಳ್ಳುತ್ತಿರುವದರಿಂದ ಭಾರತ ದೇಶದ ಕರಿಮೆಣಸು ದರ ಬಾರೀ ಕುಸಿತ ಕಂಡಿದೆ. ಇದಲ್ಲದೆ, ಕಾಫಿಯನ್ನು ಸಹ ಆಮದು ಮಾಡಿಕೊಳ್ಳುವ ಅಪಾಯವಿದೆ. ಇದರಿಂದ ಇದನ್ನೇ ನಂಬಿ ಬದುಕುತ್ತಿರುವ ಬೆಳೆಗಾರರು ಬೀದಿಗೆ ಬೀಳಲಿದ್ದು, ಬೆಳೆಗಾರರನ್ನು ಅವಲಂಬಿಸಿರುವ ಕೊಡಗಿನ ಕಾರ್ಮಿಕರು ಹಾಗೂ ಇತರ ಜನರು ಸಹ ಸಂಕಷ್ಟ ಎದುರಿಸಲಿದ್ದಾರೆ. ಕರಿಮೆಣಸು ಆಮದನ್ನು ಸಂಪೂರ್ಣ ವಾಗಿ ನಿರ್ಬಂಧಿಸಲು, ಕಾಫಿಯ ಆಂತರಿಕ ಬಳಕೆ ಹೆಚ್ಚಿಸಿ ಉತ್ತಮ ಮಾರುಕಟ್ಟೆ ಪಡೆಯಲು ರೈಲ್ವೇ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕಾಫಿಯನ್ನು ಬಳಸಲು ಆಗ್ರಹಿಸಿ ಸಂಬಂಧಿಸಿದ ಕೇಂದ್ರ ಸಚಿವರ ಗಮನ ಸೆಳೆÉಯಲು, ದ.ಕೊಡಗಿನ ಅರಣ್ಯದಂಚಿನ 9 ಗ್ರಾಮಗಳನ್ನು ವನ್ಯಜೀವಿ ಸೂಕ್ಷ್ಮ ವಲಯ ಘೋಷಣೆಯಿಂದ ಹಿಂಪಡೆಯಲು ರಾಜಕೀಯ ಪಕ್ಷ ಭೇದ ಮರೆತು ಒಂದೇ ವೇದಿಕೆಯಲ್ಲಿ ಹೋರಾಟ ನಡೆಸಲಾಗುವದು ಎಂದು ಕಾನೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಕಾನೂರು ಪಟ್ಟಣದ ಜಂಕ್ಷನ್‍ನಲ್ಲಿ ಬೆಳೆಗಾರರು, ಕಾರ್ಮಿಕರು ಹಾಗೂ ರಾಜಕೀಯ ಪಕ್ಷದ ಪ್ರಮುಖರು ಮತ್ತು ಜನಪ್ರತಿನಿಧಿಗಳು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ಎಂ.ರವೀಂದ್ರ ಅವರು ಈ ಹಿಂದೆ ಕಾಫಿ ಮಂಡಳಿ ಕಪಿಮುಷ್ಟಿಯಿಂದ ಮುಕ್ತ ಮಾರುಕಟ್ಟೆಗೆ ತರಲು ಮೂರ್ನಾಡಿನಲ್ಲಿ ಕೆ.ಸಿ. ರಾಮಮೂರ್ತಿ, ಚೌರಿರ ಪೆಮ್ಮಯ್ಯ, ದಿ. ರಘು ಅವರ ನೇತೃತ್ವದಲ್ಲಿ ಹೋರಾಟ ನಡೆಸಿ ಯಶÀಸ್ವಿಯಾಯಿತು. ಕರಿಮೆಣಸು ಆಮದುವಿನ ಮೂಲಕ ಸ್ಥಳೀಯ ಬೆಳೆಗಾರರಿಗೆ ಭಾರೀ ಅನ್ಯಾಯವಾಗಿದ್ದು, ಆಮದು ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು ಕೋಟ್ಯಾಂತರ ರೂ. ಲಾಭ ಗಳಿಸುತ್ತಿದ್ದಾರೆ. ಈ ಅನ್ಯಾಯದ ಬಗ್ಗೆ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಿಕೊಳ್ಳುತ್ತಿವೆಯೇ ಹೊರತು ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಹೋರಾಟ ಮಾಡುವ ಅಗತ್ಯವಿದೆ ಎಂಬ ಸಂದೇಶವನ್ನು ಕೊಡಗಿನದಾದ್ಯಂತ ಪಸರಿಸಲು ಕಾನೂರಿನಲ್ಲಿ ಎಲ್ಲರೂ ಸೇರಿ ಈ ಪ್ರತಿಭಟನೆ ಸಭೆಯನ್ನು ಆಯೋಜಿಸ ಲಾಗಿದೆ ಎಂದು ಹೇಳಿದರು.
ಜಿ.ಪಂ ಸದಸ್ಯ ಬಾನಂಡ ಎಂ.ಪ್ರಥ್ಯೂ ಮಾತನಾಡಿ ವಿಯೆಟ್ನಾಮ್ ಹಠಾವೋ-ಕೊಡಗು ಬಚಾವೋ ಅಂದೋಲನವನ್ನು ಎಲ್ಲರು ಸೇರಿ ಹಮ್ಮಿಕೊಳ್ಳಬೇಕಾಗಿದೆ. ಜಿಲ್ಲೆಯ ಬೆಳೆಗಾರರನ್ನು ರಕ್ಷಿಸಲು ಕೂಡಲೇ ಕೇಂದ್ರ ಸರ್ಕಾರ ವಿಯೆಟ್ನಾಮ್ ಕರಿಮೆಣಸು ಆಮದನ್ನು ನಿಲ್ಲಿಸಬೇಕು. ಈ ಬಗ್ಗೆ ಬುಧವಾರ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಹಾಗೂ ಕೇಂದ್ರ ಮಾಜಿ ಸಚಿವ ವೀರಪ್ಪಮೊಯಿಲಿ ಅವರನ್ನು ಭೇಟಿ ಮಾಡಿ ಅಗತ್ಯ ಕ್ರಮಕೈಗೊಳ್ಳಲು ಒತ್ತಾಯಿಸಲಾಗುವದು ಎಂದು ಹೇಳಿದರು.
ಗೋಣಿಕೊಪ್ಪ ಎಪಿಎಂಸಿಯ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ ನಿಯಮ ಉಲ್ಲಂಘಿಸಿ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವವರ ಬಗ್ಗೆ ಏಕೆ ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ಎಂದು ಪ್ರಶ್ನಿಸಿದ ಅವರು, ನಮ್ಮ ಜನಪ್ರತಿನಿಧಿಗಳ ನಿಲುವು ಸಂಶಯಕ್ಕೆ ಎಡೆ ಮಾಡಿದೆ. ತೋಟ, ಗದ್ದೆಯಲ್ಲಿ ಹುಲಿ, ಆನೆ, ಕಾಡೆಮ್ಮೆ, ಹಂದಿ ದಿನನಿತ್ಯ ಬೀಡುಬಿಟ್ಟಿದ್ದು ತೋಟವನ್ನು ಹಾನಿ ಮಾಡುತ್ತಿವೆ. ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಎಂದರೆ ಕೆರೆಗಳಲ್ಲಿ ಮೊಸಳೆಗಳು ಬಂದು ಸೇರಿಕೊಂಡು ಮೀನುಗಳನ್ನು ತಿಂದುಹಾಕುತ್ತಿವೆ. ಬೆಳೆಗಾರ ಬೆಳೆದ ಕಾಫಿ, ಕರಿಮೆಣಸಿಗೆ ಆಮದು ಮಾಡಿಕೊಳ್ಳುವ ಮೂಲಕ ದರ ಕುಸಿತಕ್ಕೆ ಕಾರಣವಾಗಿದೆ. ಹೀಗಾದರೆ ರೈತ, ಬೆಳೆಗಾರ ಬದುಕುವದು ಹೇಗೆ ಎಂದು ಪ್ರಶ್ನಿಸಿದ ಅವರು ಜನಪ್ರತಿನಿಧಿಗಳು ರೈತರು ಹಾಗೂ ಬೆಳೆಗಾರರ ಪರವಾಗಿದ್ದಾರೋ, ಅಥವಾ ಆಮದುದಾರರ ಪರವಾಗಿ ದ್ದಾರೋ ಎಂದು ಪ್ರಶ್ನಿಸಿದರು.
ಜೆಡಿಎಸ್ ಮುಖಂಡ ಕೆ.ಆರ್.ಸುರೇಶ್ ಮಾತನಾಡಿ ಕೇಂದ್ರ ಸರ್ಕಾರದ ಆಮದು ನೀತಿಯಿಂದ ರೈತರು ಹಾಗೂ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ಗೋಣಿಕೊಪ್ಪ ಎಪಿಎಂಸಿ ರೈತರ ಹಿತಕಾಪಾಡಲು ವಿಫಲವಾಗಿದೆ. ಕರಿಮೆಣಸನ್ನು ಬೆಳೆಯುತ್ತಿರುವ ಕೇರಳ, ಕೊಡಗು, ಚಿಕ್ಕಮಂಗಳೂರು, ಹಾಸನ ಜಿಲ್ಲೆಯ ಬೆಳೆಗಾರರನ್ನು ಹಾಗೂ ಈ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು.
ಬಾಳೆಲೆ ಗ್ರಾ.ಪಂ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಮಾತನಾಡಿ ಅರಣ್ಯ ಅಂಚಿನ 9 ಗ್ರಾಮಗಳನ್ನು ವನ್ಯಜೀವಿ ಸೂಕ್ಷ್ಮ ವಲಯ ಎಂದು ಘೋಷಿಸಿರುವ ಮೂಲಕ ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ಜನ ಜೀವನಕ್ಕೆ ತೊಂದರೆಯಾಗಲಿದೆ. ಸೂಕ್ಷ್ಮ ಪರಿಸರ ತಾಣ ಹಾಗೂ ವನ್ಯಜೀವಿ ಸೂಕ್ಷ್ಮ ವಲಯದ ನಡುವೆ ವ್ಯತ್ಯಾಸವಿದೆ. ಈ ಬಗ್ಗೆ ಜನರ ಮೂಲಭೂತ ಹಕ್ಕು ಹಾಗೂ ಜನಜೀವನಕ್ಕೆ ಧಕ್ಕೆ ತರುವ ಈ ಯೋಜನೆಯನ್ನು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಕೂಡಲೇ ವಾಪಸು ಪಡೆಯಬೇಕೆಂದು ಆಗ್ರಹಿಸಿದರು.
ಗೋಣಿಕೊಪ್ಪ ಎಪಿಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ ಮಾತನಾಡಿ ಗೋಣಿಕೊಪ್ಪ ಎಪಿಎಂಸಿಗೆ ಕರಿಮೆಣಸನ್ನು ಆಮದು ಮಾಡಿಕೊಂಡಿರುವ ಬಗ್ಗೆ ಪ್ರತಿ ಸದಸ್ಯರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ವದಂತಿ ತಪ್ಪು. ಆನ್‍ಲೈನ್ ಮೂಲಕ ಕರಿಮೆಣಸು ಆಮದು ಮಾಡಿಕೊಂಡ ತೆರಿಗೆ ಪಾವತಿಯಾದ ನಂತರವೇ ನಮ್ಮ ಸಮಿತಿಯ ಗಮನಕ್ಕೆ ಈ ವಿಚಾರ ಬಂದಿದೆ. ರೈತರಿಂದ ಆಯ್ಕೆಯಾಗಿರುವ ತಾನು ಎಂದು ರೈತರಿಗೆ ವಂಚನೆ ಮಾಡುವಂತಹ ಕೆಲಸದಲ್ಲಿ ಭಾಗಿಯಾಗದೆ ರೈತರ ಪರವಾಗಿರುವದಾಗಿ ಹೇಳಿದರು.
ಸಭೆಯಲ್ಲಿ ಕೊಡವ ಸಂಪ್ರದಾಯಿಕ ಹಕ್ಕು ಸಂಸ್ಥೆಯ ಕಾಂಡೇರ ಸುರೇಶ್, ತಾ.ಪಂ ಸದಸ್ಯ ಪ್ರಕಾಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚೆಪ್ಪುಡಿರ ಕಂದಾ ಸೋಮಯ್ಯ, ಗ್ರಾ.ಪಂ ಅಧ್ಯಕ್ಷೆ ಲತಾಕುಮಾರಿ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಹಿರಿಯರಾದ ತಾಣಚ್ಚೀರ ಶಂಭು, ಕೇಚಮಾಡ ಗಣೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಕೆ.ಜಿ.ರಮೇಶ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಚಂಗಡ ಯಮುನಾ ಚಂಗಪ್ಪ, ಪೋರಂಗಡ ಬೋಪಣ್ಣ, ಕುಂಞÂಮಾಡ ಹರೀಶ್, ಕೇಚಮಾಡ ಸಿದ್ದು, ಕೇಚಮಾಡ ವಿಶ್ವಾಸ್ ಮತ್ತಿತರರು ಹಾಜರಿದ್ದರು. ಕೆ.ಜಿ.ಸದಾಶಿವ ಸ್ವಾಗತಿಸಿ, ನಿರೂಪಿಸಿ, ಪೋರಂಗಡ ಬೋಪಣ್ಣ ವಂದಿಸಿದರು.