ಮಡಿಕೇರಿ, ಅ. 3 : ವಿಯೆಟ್ನಾಂ ಕಾಳುಮೆಣಸು ಆಮದು ವ್ಯವಹಾರಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಎಪಿಎಂಸಿ ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ, ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ತಾ. 9 ರಿಂದ ಆರಂಭಿಸುವದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಅ.3 ರಂದು ಜಿಲ್ಲಾ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿಗಳನ್ನು ತುರ್ತಾಗಿ ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ತಾ. 9 ರಿಂದ ಗೋಣಿಕೊಪ್ಪ ಎಪಿಎಂಸಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸುವದಾಗಿ ಹೇಳಿದ್ದಾರೆ.

ಕೊಡಗಿನ ಬೆಳೆಗಾರರ ಹಾಗೂ ರೈತರ ಹಿತವನ್ನು ಕಡೆಗಣಿಸಿರುವ ಎಪಿಎಂಸಿ ಆಡಳಿತ ಮಂಡಳಿ ಗೋದಾಮಿನಲ್ಲಿ ಹುಡಿಯಂತ್ರ ಮತ್ತು ಜನರೇಟರ್ ಅಳವಡಿಕೆಗೆ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.

ಆಮದು ಕಾಳುಮೆಣಸು ವ್ಯವಹಾರದ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜಿನಾಮೆ ಸಲ್ಲಿಸಬೇಕು. ತಪ್ಪಿದಲ್ಲಿ ಕಾಂಗ್ರೆಸ್ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಟಾಟು ಮೊಣ್ಣಪ್ಪ ಹೇಳಿದ್ದಾರೆ.