ಮಡಿಕೇರಿ, ಅ. 3: ಮಡಿಕೇರಿ ನಗರದಲ್ಲಿ ದಸರಾ ಸಂದರ್ಭ ನಡೆದ ಕೊಲೆ ಪ್ರಕರಣದ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿವೆ.ಈ ಕುರಿತು ಹೇಳಿಕೆ ನೀಡಿರುವ ಈ ಸಂಘಟನೆಗಳ ಪ್ರಮುಖರಾದ ಟಾಟಾ ಬೋಪಯ್ಯ, ಡಿ. ನರಸಿಂಹ, ಪಿ.ಜಿ. ಮಂಜುನಾಥ್, ಎನ್.ಕೆ. ಅಜಿತ್ಕುಮಾರ್ ಅವರುಗಳು ಇದೊಂದು ವ್ಯವಸ್ಥಿತ ಹುನ್ನಾರ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಹೇಳಿಕೆ ಇಂತಿದೆದಸರಾ ನಾಡಹಬ್ಬದಂದು ಮಹದೇವಪೇಟೆ ರಾಜಬೀದಿಯಲ್ಲಿ ಜನ ಜಂಗುಳಿ ನಡುವೆ ಅಮಾಯಕ ಹಿಂದೂ ಯುವಕ ಚಂದ್ರಶೇಖರ್ (27) ಎಂಬವರನ್ನು ಅಮಾನುಷವಾಗಿ ಸಮಾಜ ಘಾತುಕರು ಶಾಂತಿ ಭಂಗದೊಂದಿಗೆ ಕೋಮು ಗಲಭೆ ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರದೊಂದಿಗೆ ಕೊಲೆಗೈದಿರುವದನ್ನು ವಿಶ್ವ ಹಿಂದೂ ಪರಿಷದ್, ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಚಂದ್ರಶೇಖರ್ ಅವರನ್ನು ಕೊಲೆಗೈದಿರುವ ದುಷ್ರ್ಕಮಿಗಳ ಬಗ್ಗೆ ನಗರದ ಕಾಲೇಜು ರಸ್ತೆಯ ಸ್ಟೇಟ್ ಬ್ಯಾಂಕ್ ಬಳಿ ಸಾರ್ವಜನಿಕರು ಹಾಗೂ ಕರ್ತವ್ಯ ನಿರತ ಪೊಲೀಸರೆ ಗಮನಿಸಿರುವ ಬಗ್ಗೆ ಮಾಹಿತಿ ಇದೆ. ನೀಲಿ ಬಣ್ಣದ ಕಾರೊಂದರಲ್ಲಿ ಬಂದಿದ್ದ ನಾಲ್ಕು ಮಂದಿ ದುಷ್ರ್ಕಮಿಗಳು ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದುದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವೇಳೆ ದುಷ್ರ್ಕಮಿ ಒಬ್ಬ ಕರ್ತವ್ಯ ನಿರತ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ನನ್ನ ಮೇಲೆ ಬೇಕಾದಷ್ಟು ಕೇಸುಗಳಿವೆ ಏನೂ ಬೇಕಾದರೂ ಮಾಡಿಕೊ ಎಂದು ಆರ್ಭಟಿಸಿದಲ್ಲದೆ, ಚಂದ್ರಶೇಖರ್ನನ್ನು ಕೊಲೆಗೈಯದೆ ಬಿಡಲಾರೆ ಎಂದು ಬಹಿರಂಗವಾಗಿ ಹೆದರಿಸಿದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವೇಳೆ ಪೊಲೀಸರು ಎಚ್ಚೆತ್ತುಕೊಂಡು ಚಂದ್ರಶೇಖರ್ ಹಂತಕರನ್ನು ವಶಕ್ಕೆ ಪಡೆದುಕೊಂಡಿದ್ದರೆ
(ಮೊದಲ ಪುಟದಿಂದ) ದಸರಾ ದಿನ ನಡೆಯಬಹುದಾಗಿದ್ದ ವ್ಯವಸ್ಥಿತ ಕೊಲೆಯನ್ನು ಪೊಲೀಸರು ತಪ್ಪಿಸಬಹುದಾಗಿತ್ತೆಂದು ಜನ ವಲಯದಲ್ಲಿ ಆಕ್ರೋಶವಿದೆ.
ಆ ಬಳಿಕ ಕೆಲವೇ ಕ್ಷಣಗಳಲ್ಲಿ ಕಾರ್ಪೋರೇಷನ್ ಬ್ಯಾಂಕ್ ಎದುರು ಇದೇ ದುಷ್ಕರ್ಮಿಗಳು ಚಂದ್ರಶೇಖರ್ ಮೇಲೆ ಧಾಳಿ ನಡೆಸಿದ್ದನ್ನು ಪೊಲೀಸ್ ಇಲಾಖೆಯು ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿ ತನಿಖೆ ನಡೆಸಬಹುದಿತ್ತು. ನಂತರ ತಡ ರಾತ್ರಿಯಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಎದುರು ಮೂರನೇ ಬಾರಿ ಧಾಳಿಯೊಂದಿಗೆ ಚಂದ್ರಶೇಖರ್ ನನ್ನು ವ್ಯವಸ್ಥಿತವಾಗಿ ಜನವಲಯದಲ್ಲಿ ಭಯದೊಂದಿಗೆ ದಸರಾ ನಾಡಹಬ್ಬವನ್ನು ಹಾಳುಗೆಡವಿ ಗಲಭೆ ಉಂಟು ಮಾಡಿ ಕೊಲೈಗೆದಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೆ ದಸರಾ ಮಂಟಪಗಳ ಮೆರವಣಿಗೆ ಹಾಗೂ ಕರಗ ದೇವತೆಗಳು ಸಾಗುವ ರಾಜಬೀದಿ ಯಲ್ಲೇ ಚಂದ್ರಶೇಖರ್ನನ್ನು ದೇವಾಲಯದ ಮುಂಭಾಗದಲ್ಲೇ ದುಷ್ರ್ಕಮಿಗಳು ಕೊಲೆಗೈದಿರುವದು ವ್ಯವಸ್ಥಿತ ಪಿತೂರಿಯೊಂದಿಗೆ ದಸರಾ ನಾಡಹಬ್ಬದಲ್ಲಿ ಗಲಭೆ ಸೃಷ್ಟಿಸಲು ಎಸಗಿರುವ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಿದ್ದರೂ ಹಿಂದೂ ಸಮಾಜ ದಸರಾ ನಾಡ ಹಬ್ಬಕ್ಕೆ ಅಡ್ಡಿಯಾಗದ ರೀತಿಯಲ್ಲಿ ತಾಳ್ಮೆಯೊಂದಿಗೆ ನಡೆದುಕೊಂಡಿದೆ. ಆದರೆ ಪೊಲೀಸ್ ಇಲಾಖೆ ರಾಷ್ಟ್ರದ್ರೋಹಿ ಸಂಘಟನೆಗಳ ಪಿತೂರಿಯೊಂದಿಗೆ ನಡೆದಿರಬಹು ದಾದ ಶಂಕಿತ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸದೆ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿರುವದು ಖಂಡನಾರ್ಹ. ತಕ್ಷಣ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಜರಂಗದಳ, ಹಿಂದೂ ಸಂಘಟನೆಗಳ ಹಾಗೂ ಸಮಾಜದ ಬೆಂಬಲದೊಂದಿಗೆ ತೀವ್ರ ಪ್ರತಿಭಟನೆ ಕೈಗೊಳ್ಳಲು ಮುಂದಾಗಲಿದೆ ಎಂಬದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.