*ಗೋಣಿಕೊಪ್ಪಲು, ಅ. 3: ಎರಡು ಲಕ್ಷದ ನಲವತ್ತೆರಡು ಸಾವಿರ ಕೋಟಿ ಸಾಲದ ಹೊರೆ ಹೊತ್ತ ಕಾಂಗ್ರೆಸ್ ಸರ್ಕಾರಕ್ಕೆ ಬಡವರ, ಶೋಷಿತ ವರ್ಗದವರ, ಹರಿಜನ, ಗಿರಿಜನರ ಅಭಿವೃದ್ಧಿ ಕಾರ್ಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಶಕ್ತಿ ಇಲ್ಲವಾಗಿದೆ ಎಂದು ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕುಟ್ಟ ಪಟ್ಟಣದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಇವರುಗಳು ಕಾಂಗ್ರೆಸ್ ಸರ್ಕಾರದ ವೈಫಲ್ಯತೆಯ ಬಗ್ಗೆ ಮಾತನಾಡಿದರು.ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಹರಿಜನ, ಗಿರಿಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಕಾಂಗ್ರೆಸ್ ಸರ್ಕಾರ ಎಡವಿದೆ. ಕೋಟ್ಯಾಂತರ ರೂಪಾಯಿ ಸಾಲ ಮಾಡುವ ಮೂಲಕ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನೇ ರಾಜ್ಯ ಸರ್ಕಾರದ ಭಾಗ್ಯಗಳೆಂದು ಜನರನ್ನು ವಂಚಿಸುತ್ತಿದ್ದಾರೆ. ಜಿಲ್ಲೆಯ ರಸ್ತೆಯ ಅಭಿವೃದ್ಧಿಗಳು ಶೂನ್ಯವಾಗಿದೆ. ಬಿ.ಜೆ.ಪಿ ಸರ್ಕಾರದ ಆಡಳಿತವಿದ್ದಾಗ ಹಲವು ಯೋಜನೆಗಳನ್ನು ನೀಡುವ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ನಡೆದಿದೆ. ಅಂದು ಬಿ.ಜೆ.ಪಿ. ಸರ್ಕಾರ ಜನರ ಹಿತದೃಷ್ಟಿಗಾಗಿ 23 ಸಾವಿರ ಕೋಟಿ ಸಾಲ ಮಾಡಿದ ಸಂದರ್ಭ ದೋಷಾರೋಪಣೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ಲಕ್ಷಕ್ಕೂ ಮಿಗಿಲಾಗಿ ಸಾಲದ ಹೊರೆಹೊತ್ತು ನಿಂತಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯಾದ್ಯಂತ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ.

(ಮೊದಲ ಪುಟದಿಂದ) ಇಲಾಖೆ ಅಧಿಕಾರಿಗಳಿಗೂ ನೆಮ್ಮದಿ ಇಲ್ಲದಂತಾಗಿದೆ; ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಾ ಕಪ್ಪು ಹಣ ತುಂಬಿಸಿಕೊಳ್ಳುವ ಕಾಂಗ್ರೆಸ್ ಮಂತ್ರಿಗಳಿಗೆ ಪಾಠ ಕಲಿಸಬೇಕಾಗಿದೆ. ದೇಶದಾದ್ಯಂತ ಬಡವರಿಗೆ ಬೆಳಕು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿದ್ಯುತ್ ಕಲ್ಪಿಸಲು ಯೋಜನೆ ರೂಪಿಸಿಕೊಂಡಿದೆ ಇದಕ್ಕಾಗಿ 16 ಸಾವಿರ ಕೋಟಿ ಅನುದಾನ ಮೀಸಲಾಗಿರಿಸಿದೆ. ಅಲ್ಲದೆ ಬಡವರಿಗಾಗಿ ಗ್ಯಾಸ್ ಸಿಲಿಂಡರ್ ವ್ಯವಸ್ಥೆಯನ್ನು ಉಜ್ವಲ್ ಯೋಜನೆಯಡಿ ನೀಡುತ್ತಿದೆ. ಈ ಯೋಜನೆಯನ್ನು ಸಹ ಕಾಂಗ್ರೆಸ್ ಸರ್ಕಾರದ ಯೋಜನೆಯೆಂದು ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಈ ಮೂಲಕ ಸಿಲಿಂಡರ್ ಪಡೆದ ಫಲಾನುಭವಿಗಳಿಂದ ಕೆಲವರು ಸಾವಿರ, ಎರಡು ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿದೆ ಎಂದರು. ಕುಟ್ಟ ಗ್ರಾ. ಪಂಚಾಯಿತಿ ಅಭಿವೃದ್ಧಿ ಯಾವದೇ ಹಣಕಾಸು ಯೋಜನೆ ಬಂದಿಲ್ಲ ಕಳೆದ 14ನೇ ಹಣಕಾಸು ಯೋಜನೆಯನ್ನು ಬಿಟ್ಟು ಉಳಿದ ಯಾವದೇ ಯೋಜನೆಗಳು ಬಾರದಿರುವದು ವಿಷಾದನಿಯ. ಕೊಡಗನ್ನು ಕಾಂಗ್ರೆಸ್ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಆರೋಪಿಸಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿನ ಮಂತ್ರಿಗಳಿಗೆ ಜ್ಞಾನದ ಕೊರತೆ ಇದೆ; ಸಿದ್ದರಾಮಯ್ಯ ಸರ್ಕಾರ ನಿದ್ರಾಮ್ಮಯ್ಯ ಸರ್ಕಾರವಾಗಿದೆ. ವಿಧಾನಸಭೆಗಳಲ್ಲಿ ಸದಾ ನಿದ್ರಿಸುವ ಮೂಲಕ ಕೆಲವು ಮಂತ್ರಿಗಳು ಮುಂಚೂಣಿಯಲ್ಲಿದ್ದಾರೆ. ಇವರೆಲ್ಲಾರಿಗೆ ರಾಜ್ಯದ ಹಿತ ಬಡವರ ಯೋಗಕ್ಷೇಮಗಳು ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿದರು. ಸಚಿವ ಜಾರ್ಜ್ ಅವರನ್ನು ಸಿದ್ದರಾಮಯ್ಯ ಉಳಿಸಿಕೊಂಡಿರುವದರ ಹಿಂದೆ ನಿಗೂಢÀತೆ ಅಡಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ಕಾರ್ಯನಿರ್ವ ಹಿಸುತ್ತಿದ್ದಾರೆ. ಇದಕ್ಕೆ ಸಿ.ಓ.ಡಿಯೂ ಹೊರತಾಗಿಲ್ಲ. ಮಂತ್ರಿ ಮೇಟಿ ಸೆಕ್ಸ್ ಹಗರಣವನ್ನು ಎರಡೇ ತಿಂಗಳಲ್ಲಿ ನಿರ್ದೋಷಿ ಎಂದು ಹಾಗೂ ಜಾರ್ಜ್ ಹಗರಣವನ್ನು ಎರಡೆ ತಿಂಗಳಲ್ಲಿ ವರದಿ ನೀಡಿ ಕಾಂಗ್ರೆಸಿಗೆ ನಿಷ್ಠೆ ತೋರಿರುವದು ಸತ್ಯದ ವಿಚಾರ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಮಂತ್ರಿಯ ಮನೆಯಲ್ಲಿ ಕೋಟ್ಯಾಂತರ ನಗದು ಹಾಗೂ ಆಸ್ತಿ ಪತ್ರಗಳು ದೊರೆಯುತ್ತದೆ ಎಂದರೆ ಕಾಂಗ್ರೆಸಿನ ಭ್ರಷ್ಟ ಆಡಳಿತದ ಬಗ್ಗೆ ಪ್ರಶ್ನೆ ಮಾಡಬೇಕಾದ ಅನಿರ್ವಾಯತೆ ಎದುರಾಗಿದೆ. ಬಡವರ, ನಾಲ್ಕುವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ಶೂನ್ಯ ಅಭಿವೃದ್ಧಿಯನ್ನು ಕಂಡಿದೆ. ಕೊಡಗಿಗಂತೂ ಯಾವದೇ ಅನುದಾನಗಳನ್ನು ನೀಡದೆ ಬಿ.ಜೆ.ಪಿ. ಶಾಸಕರೆÀಂಬ ಧೋರಣೆಯಿಂದ ಅಭಿವೃದ್ಧಿಯಿಂದ ದೂರ ಉಳಿದಿದೆ. ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಬಿ.ಜೆ.ಪಿ. ಸರ್ಕಾರದ ಆಡಳಿತ ಅನಿವಾರ್ಯತೆ ಇದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಭಾರತೀಶ್ ಮಾತನಾಡಿ ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿ.ಜೆಪಿ. ಗೆಲುವು ಬೇಕಾಗಿದೆ. ಭ್ರಷ್ಟ ಆಡಳಿತವನ್ನು ತೊಡೆದು ಹಾಕಲು ಬಿ.ಜೆ.ಪಿ. ಮುಂದಾಗಬೇಕು ಎಂದು ತಿಳಿಸಿದರು. ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಪ್ರ್ರಾಸ್ತಾವಿಕ ಮಾತನಾಡಿ ಕಾಂಗ್ರೆಸ್ ಸರ್ಕಾರದ ವೈಫಲ್ಯತೆಗಳ ಬಗ್ಗೆ ಜಿಲ್ಲೆಯ ಅಭಿವೃದ್ಧಿಗೆ ಬಿ.ಜೆ.ಪಿಯ ಅವಶ್ಯಕತೆಯ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭ ಜಿಲ್ಲಾ ಬಿ.ಜೆಪಿ. ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ವಿ.ಕೆ. ಲೋಕೇಶ್, ರಾಬಿನ್ ದೇವಯ್ಯ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಮಾಚಿಮಂಡ ಗಪ್ಪಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಕುಟ್ಟ ಸ್ಥಾನೀಯ ಸಮಿತಿಯ ಅಧ್ಯಕ್ಷ ನವೀನ್, ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಆರ್.ಎಂ.ಸಿ. ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಉಪಾಧ್ಯಕ್ಷ ಕಳ್ಳೆಂಗಡ ಬಾಲಕೃಷ್ಣ, ತಾಲೂಕು ಫೆಡರಲ್ ಉಪಾಧ್ಯಕ್ಷ ಮಧು ದೇವಯ್ಯ, ಮಡಿಕೇರಿ ಕ್ಷೇತ್ರ ಉಸ್ತುವಾರಿ ಐನಂಡ ಜಪ್ಪು ಅಯ್ಯಪ್ಪ ಉಪಸ್ಥಿತರಿದ್ದರು. -ಚಿತ್ರವರದಿ: ಎನ್.ಎನ್. ದಿನೇಶ್