ಶನಿವಾರಸಂತೆ, ಅ. 2: ಭಾರತದ ಕಾಫಿ ಉತ್ಪನ್ನ ವಿಶ್ವಮಟ್ಟದ ಮಾರುಕಟ್ಟೆ ಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಬೇಕಾದರೆ ಭಾರತದ ಕಾಫಿ ಬೆಳೆಗಾರರು ಕಾಫಿ ಗುಣಮಟ್ಟವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಕೆ. ಸಿ. ರಾಮಮೂರ್ತಿ ಅಭಿಪ್ರಾಯಪಟ್ಟರು.
ಅವರು, ಶನಿವಾರಸಂತೆ ಸಮೀಪದ ಗುಡುಗಳಲೆಯಲ್ಲಿ ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘ ಹಾಗೂ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದು ನಮ್ಮ ದೇಶದ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬೆಳೆಯುವಂತಹ ವಿವಿಧ ಕಾಫಿ ಪೇಯಗಳು ಲಭ್ಯ ಇರುವದರ ಜೊತೆಯಲ್ಲಿ ವಿದೇಶದ ಕಾಫಿ ಪೇಯಗಳು ಲಭ್ಯ ಇರುವದರಿಂದ ಜೊತೆಯಲ್ಲಿ ವಿದೇಶದ ಕಾಫಿ ಪೇಯಗಳು ಲಭ್ಯ ಇರುತ್ತದೆ. ಆದರೆ ವಿದೇಶದ ಕಾಫಿಗೆ ಹೆಚ್ಚಿನ ಬೆಲೆ ತೆತ್ತು ನಾವು ಕುಡಿಯುತ್ತಿರುವದು ವಿಪರ್ಯಾಸ ಎಂದರು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಉತ್ಪನ್ನಗಳಿಗೆ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಬೆಳೆಯುವ ಕಾಫಿ ಉತ್ಪನ್ನಗಳ ಗುಣಮಟ್ಟವನ್ನು ಬೆಳೆಗಾರರು ತಯಾರು ಮಾಡಿ ಕೊಂಡರೆ ನಮ್ಮ ದೇಶದ ಕಾಫಿ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದರು. ಕರ್ನಾಟಕದಲ್ಲಿ ಕೊಡಗು, ಸಕಲೇಶಪುರ, ಚಿಕ್ಕಮಂಗಳೂರಿನಲ್ಲಿ ಹೆಚ್ಚಾಗಿ ಕಾಫಿಯನ್ನು ಬೆಳೆಯುತ್ತಾರೆ. ವಿಶ್ವಮಟ್ಟದಲ್ಲಿ ಕರ್ನಾಟಕ ಕಾಫಿಗೆ ಹೆಚ್ಚಿನ ಬೇಡಿಕೆ ಇರುವದರ ಬಗ್ಗೆ ರಾಜ್ಯದ ಕಾಫಿ ಬೆಳೆಗಾರರು ಅವಲೋಕಿಸಬೇಕಾಗಿದೆ. ಇದೀಗ ಕೊಡಗು ಜಿಲ್ಲೆಯಲ್ಲಿ ಆರ್.ಎಂ.ಸಿ. ಮೂಲಕ ವಿಯೇಟ್ನಾಂನಿಂದ ಕಳಪೆ ಕರಿಮೆಣಸು ಉತ್ಪನ್ನದೊಂದಿಗೆ ಸೇರಿಸಿ ಮಾರಾಟ ಮಾಡುತ್ತಿರುವದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕರ್ನಾಟಕ ಕಾಫಿ ಉತ್ಪನ್ನದ ಮೇಲಾಗಿರುವ ಪರಿಣಾಮ ಹಾಗೂ ಬೆಳೆಗಾರರ ಸಮಸ್ಯೆ ಸೇರಿದಂತೆ ವಿಯೇಟ್ನಾಂ ನಿಂದ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಕರಣದ ಬಗ್ಗೆ ರಾಜ್ಯ ಸರಕಾರದ ಪರವಾಗಿ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವದೆಂದು ಭರವಸೆ ನೀಡಿದರು.
ಹೈ ಕೋರ್ಟ್ ವಕೀಲ ಹೆಚ್. ಎಸ್. ಚಂದ್ರಮೌಳಿ ಮಾತನಾಡಿ, ಕರ್ನಾಟಕದ ಕಾಫಿ ಉತ್ಪನ್ನದ ಮೇಲಾಗಿರುವ ಸಮಸ್ಯೆ ಹಾಗೂ ಕರಿಮೆಣಸು ಆಮದು ಪ್ರಕರಣದ ಬಗ್ಗೆ ಜಿಲ್ಲೆಯ ಬೆಳೆಗಾರರೆಲ್ಲರೂ ಒಂದಾಗಬೇಕಾಗಿದೆ. ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳ ಹೋರಾಟಗಳಿಗೆ ಪ್ರತಿಯೊಬ್ಬ ಬೆಳೆಗಾರರು ಕೈಜೋಡಿಸಬೇಕೆಂದರು.
ಕಾಫಿ ಬೆಳೆಗಾರರ ಪರವಾಗಿ ಬೆಳೆಗಾರ ಎಸ್. ಎಂ. ಉಮಾಶಂಕರ್ ಮಾತನಾಡಿ, ಜಿಲ್ಲೆಯ ಕಾಫಿ ಉತ್ಪನ್ನಕ್ಕೆ ಬೇಡಿಕೆಯಲ್ಲಿ ಕುಸಿತ, ವಿಯೇಟ್ನಾಂ, ಶ್ರೀಲಂಕಾ ಮುಂತಾದ ವಿದೇಶದ ಕಳಪೆ ಮಟ್ಟದ ಕರಿಮೆಣಸು ಆಮದು ಮಾಡಿಕೊಂಡು ಮಾರಾಟ ಮಾಡಿ ಜಿಲ್ಲೆಯ ರೈತರಿಗೆ ವಂಚಿಸುತ್ತಿರುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕಾದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಕಾಫಿ ಮತ್ತು ಕರಿಮೆಣಸು ಉತ್ಪನ್ನಗಳ ಆಮದು ವ್ಯವಸ್ಥೆಯಲ್ಲಿ ಕೆಲವು ನೀತಿಯನ್ನು ಅಳವಡಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಗುಲಾಬ್‍ಚಂದ್ರ ಪಗಾರಿಯಾ, ಶನಿವಾರಸಂತೆ ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್. ಎಸ್. ವಸಂತ್, ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್. ಸಿ. ಶರತ್ ಶೇಖರ್, ಕಾರ್ಯದರ್ಶಿ ಮಲ್ಲೆಗೌಡ, ರೋಟರಿ ಸಂಸ್ಥೆಯ ಹೆಚ್.ವಿ. ದಿವಾಕರ್, ಹಂಡ್ಲಿ ಗ್ರಾ. ಪಂ. ಅಧ್ಯಕ್ಷ ಸಂದೀಪ್, ಕಾಫಿ ಬೆಳೆಗಾರ ಕೆ.ಎಂ. ವಿನೂತ್‍ಶಂಕರ್, ಇಂಜಿನಿಯರ್ ಎ. ಡಿ. ಮೋಹನ್, ಬೆಳೆಗಾರ ಸಂಘದ ಪದಾಧಿಕಾರಿಗಳು ಮತ್ತು ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಕಾಫಿ ದಿನದ ಪ್ರಯುಕ್ತ ಬೆಳೆಗಾರರ ಸಂಘ ಹಾಗೂ ರೋಟರಿ ಸಂಸ್ಥೆಯಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಉಚಿತವಾಗಿ ಕಾಫಿ ಮತ್ತು ಬಿಸ್ಕತ್‍ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.