ಗೋಣಿಕೊಪ್ಪಲು, ಅ. 3: ಕೆಲವರನ್ನು ಓಲೈಸಲು ಶೋಭಾಯಾತ್ರೆಯ ತೇರು ಪೈಪೋಟಿಯಲ್ಲಿ ಮೂವರು ವಿಜೇತರನ್ನು ಘೋಷಣೆ ಮಾಡಬೇಕಾದ ಕಾವೇರಿ ದಸರಾ ಸಮಿತಿ ಜಂಟಿಯಾಗಿ 6 ವಿಜೇತರನ್ನು ಘೋಷಿಸಿದೆ ಎಂದು ಗೋಣಿಕೊಪ್ಪ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಆರೋಪಿಸಿದ್ದಾರೆ.

ಶೋಭಾಯಾತ್ರೆಯಲ್ಲಿ ಸ್ಪರ್ಧಿಸಿದ್ದ ತೇರುಗಳ ಫಲಿತಾಂಶದಲ್ಲಿ ವಿಜೇತರನ್ನು ಆಯ್ಕೆ ಮಾಡುವಲ್ಲಿ ತಪ್ಪುಗಳು ನಡೆದಿವೆ. ಕೆಲವರನ್ನು ಓಲೈಸುವ ಕಾರ್ಯ ದಲ್ಲಿ ಸಮಿತಿ ತೊಡಗಿಸಿ ಕೊಂಡಿತ್ತು. ಗೊಂದಲದಲ್ಲಿ ವಿಜೇತರನ್ನು ಆಯ್ಕೆ ಮಾಡುವ ಬದಲು ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನಗಳನ್ನು ಘೋಷಣೆ ಮಾಡಬಹುದಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶೋಭಾಯಾತ್ರೆಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ; ನಮ್ಮನ್ನು ಕಡೆಗಾಣಿಸಿ ಅವಮಾನಿಸುವದಾದರೆ ದಶಮಂಟಪ ಸಮಿತಿ ರಚನೆ ಮಾಡುವ ಅವಶ್ಯಕತೆ ಇರಲಿಲ್ಲ. ತೀರ್ಪು ಗಾರರು ಆಗಮಿಸುವ ತೇರು ವೀಕ್ಷಣೆಗೆ ಬರುವ ಮಾಹಿತಿ ಯನ್ನು ನಮಗೆ ನೀಡದೆ ಕಾವೇರಿ ದಸರಾ ಸಮಿತಿ ಅವಮಾನ ಮಾಡಿದೆ. ತೀರ್ಪುಗಾರಿಕೆಯಲ್ಲಿ ನಡೆದಿರುವ ಲೋಪದೋಷಗಳಿಗೆ ಕಾವೇರಿ ದಸರಾ ಸಮಿತಿ ನೇರ ಹೊಣೆ. ಕಾವೇರಿ ದಸರಾ ಸಮಿತಿ ಎಲ್ಲಾ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದೆ ಎಂದು ಆರೋಪಿಸಿದರು.

ದಶಮಂಟಪಗಳ ಶೋಭಾಯಾತ್ರೆ ವಿಜೇತರನ್ನು ಪ್ರದರ್ಶನ ಕೊನೆಗೊಳ್ಳುವ ಮೊದಲೇ ಘೋಷಿಸಿ ಕಾವೇರಿ ದಸರಾ ಸಮಿತಿ ಗೊಂದಲ ಸೃಷ್ಠಿಸಿದೆ. ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷರ ಕ್ಷಮೆಯಾಚನೆಗೆ ಸಮಿತಿ ಎಡವಿದೆ ಎಂಬದಕ್ಕೆ ಸಾಕ್ಷಿಯಾಗಿದೆ ಎಂದರು.

ದಶಮಂಟಪಗಳ ವಿಜೇತರನ್ನು ಬೆಳಿಗ್ಗೆ 4 ಗಂಟೆಗೆ ಘೋಷಣೆ ಮಾಡುವದಾಗಿ ಕಾವೇರಿ ದಸರಾ ಸಮಿತಿ ಹೇಳಿಕೆ ನೀಡಿತ್ತು. ಆದರೆ ಬೆಳಗ್ಗೆ 6 ಗಂಟೆಯಾದರೂ ಪ್ರದರ್ಶನ ಮುಗಿದಿರಲಿಲ್ಲ. ಸಮಯ ಪಾಲನೆ ಯಲ್ಲಿ ಸಮಿತಿ ಎಡವಿದೆ ಎಂದರು.