ಸೋಮವಾರಪೇಟೆ, ಅ. 3: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸಭೆಯನ್ನು ಕರೆಯುವಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆದ ಮಡಿಕೇರಿ ತಹಶೀಲ್ದಾರ್ ವಿಫಲರಾಗಿದ್ದು, ಸರಕಾರವೇ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಅಕ್ರಮ ಸಕ್ರಮ ಸಮಿತಿಯ ನಾಮ ನಿರ್ದೇಶಿತ ಸದಸ್ಯರುಗಳು ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಹೆಚ್.ಸಿ. ನಾಗೇಶ್, ಸಮಿತಿಯ ಕಾರ್ಯದರ್ಶಿಗಳಾಗಿರುವ ಮಡಿಕೇರಿ ತಹಶೀಲ್ದಾರರು ಕಳೆದ 4 ತಿಂಗಳಿನಿಂದ ಸಮಿತಿ ಸಭೆಯನ್ನು ಕರೆದಿಲ್ಲ. ದೂರವಾಣಿ ಕರೆ ಮಾಡಿದರೆ ಸಭೆಯನ್ನು ಕರೆಯಲು ಸಮಯವಿಲ್ಲ; ಕೆಲಸದ ಒತ್ತಡ ಇದೆ ಎಂದು ಸಬೂಬು ಹೇಳುತ್ತಾರೆ. ಸಮಿತಿಯ ಅಧ್ಯಕ್ಷ ಶಾಸಕ ಅಪ್ಪಚ್ಚು ರಂಜನ್ ಸಹ ಸಭೆಯನ್ನು ಕರೆಯಲು ಉತ್ಸಾಹ ತೋರುತ್ತಿಲ್ಲ. ಕನಿಷ್ಟ ಪಕ್ಷ ತಹಶೀಲ್ದಾರರಿಗೆ ಸೂಚನೆಯನ್ನು ನೀಡುತ್ತಿಲ್ಲ. ಸಭೆ ಕರೆಯುವಲ್ಲಿ ವಿಫಲ ರಾಗಿರುವ ತಹಶೀಲ್ದಾ ರರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಪ್ರತಿ ಶನಿವಾರ ಸಭೆ ಕರೆಯ ಬೇಕೆಂಬ ಆದೇಶ ವಿದ್ದರೂ ಸಭೆಯನ್ನು ಕರೆಯುತ್ತಿಲ್ಲ. ರೈತರು ಅನಾವಶ್ಯಕವಾಗಿ ತಾಲೂಕು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಭೆಯ ದಿನಾಂಕ ನಿರ್ಧಾರ ಮಾಡಿ ನಂತರ ಮುಂದೂಡಲಾಗುತ್ತಿದೆ. ತಕ್ಷಣ ಈ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಗೋಷ್ಠಿಯಲ್ಲಿದ್ದ ಮತ್ತೋರ್ವ ಸದಸ್ಯ ಎಂ.ಡಿ. ಸುಬ್ಬಯ್ಯ ಒತ್ತಾಯಿಸಿದರು.