ಮಡಿಕೇರಿ, ಅ. 3: ಕಂಚಿಕಾಮಾಕ್ಷಿ ದೇವಾಲಯ ಮಂಟಪ ಸಮಿತಿಯ ಮೂವರು ಸದಸ್ಯರು ದಶಮಂಟಪ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇಂದು ಇಲ್ಲಿನ ಬಾಲಭವನದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿವಿಧ ದೇವಾಲಯ ಸಮಿತಿಗಳ ಪದಾಧಿಕಾರಿಗಳು ಪ್ರಕರಣವನ್ನು ಖಂಡಿಸಿದರು. ಕೆಲವರು ಮುಂದಿನ ಬಾರಿಯಿಂದ ದಶಮಂಟಪ ಸಮಿತಿ, ತೀರ್ಪುಗಾರಿಕೆ ಪ್ರಕ್ರಿಯೆ ಬೇಡವೆಂದು ಅನಿಸಿಕೆ ವ್ಯಕ್ತಪಡಿಸಿದರು. ಇನ್ನೂ ಕೆಲವರು ನಾವು ದಶಮಂಟಪ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದಿಲ್ಲ ಎಂದು ಹೇಳಿದರು. ಈ ಬಗ್ಗೆ ಪರಸ್ಪರ ಚರ್ಚೆ - ವಿಚರ್ಚೆ ನಡೆದು ದಶಮಂಟಪ ಸಮಿತಿಗೆ ಅದರದೇ ಆದ ಗೌರವವಿದ್ದು, ಅದನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂಬ ಸಲಹೆ ಕೇಳಿ ಬಂತು. ಅಧ್ಯಕ್ಷ ಸತೀಶ್ ಧರ್ಮಪ್ಪ ಮಾತನಾಡಿ, ದಶಮಂಟಪ ಸಮಿತಿಯೇ ಬೇಡ, ಮಂಟಪಗಳ ನಡುವೆ ಪೈಪೋಟಿ ಯನ್ನು ನಿಲ್ಲಸಿಬೇಕೆಂಬದು ತನ್ನ ಅಭಿಪ್ರಾಯವಾಗಿದ್ದು, ಇದಕ್ಕೆ ಒಂಭತ್ತು ಮಂಟಪದವರು

(ಮೊದಲ ಪುಟದಿಂದ) ಒಪ್ಪಿಗೆ ನೀಡಬೇಕು ಎಂದಾಗ ಒಮ್ಮತ ವ್ಯಕ್ತಗೊಳ್ಳಲಿಲ್ಲ.

ದಶಮಂಟಪ ಸಮಿತಿಯನ್ನು ರದ್ದು ಮಾಡಲು ಹಾಗೂ ಪೈಪೋಟಿಯನ್ನು ನಿಲ್ಲಿಸಲು ತೀರ್ಮಾನ ಕೈಗೊಳ್ಳುವದು ಸರಿಯಲ್ಲ. ನಿಮ್ಮ ಮೇಲೆ ಯಾರು ಹಲ್ಲೆ ಮಾಡಿದ್ದಾರೋ ಆ ಸಮಿತಿಯ ಮೇಲೆ ನೀವು ಕೈಗೊಳ್ಳುವ ಕ್ರಮದ ಬಗ್ಗೆ ಮಾತ್ರ ಸಭೆಗೆ ತಿಳಿಸಿ ಎಂದು ಮಂಟಪಗಳ ಪ್ರಮುಖರು ಹೇಳಿದರು. ಈ ಬಗ್ಗೆ ಕೆಲಹೊತ್ತು ತಮ್ಮ ಸಹ ಸದಸ್ಯರೊಂದಿಗೆ ಚರ್ಚಿಸಿದ ಸತೀಶ್ ಧರ್ಮಪ್ಪ, ತಮ್ಮ ಮೇಲೆ ಹಲ್ಲೆ ಮಾಡಿರುವವರು ಬಹಿರಂಗ ಕ್ಷಮೆಯಾಚಿಸಬೇಕು. ಮಾತ್ರವಲ್ಲದೇ ಅವರ ಸಮಿತಿಗೆ ನೀಡುವ ಅನುದಾನದಲ್ಲಿ ಶೇ. 50 ರಷ್ಟನ್ನು ಕಡಿತಗೊಳಿಸಬೇಕು ಎಂಬದು ನಮ್ಮ ತೀರ್ಮಾನವಾಗಿದೆ ಎಂದು ಸಭೆಗೆ ತಿಳಿಸಿದರು. ಈ ತೀರ್ಮಾನಕ್ಕೂ ಪರ - ವಿರೋಧಗಳು ಕೇಳಿ ಬಂದವು. ಚಚೆ - ವಿಚರ್ಚೆಗಳು ನಡೆದವು. ಅಂತಿಮವಾಗಿ ಯಾವದೇ ತೀರ್ಮಾನ ಅಧಿಕೃತವಾಗ ದಾಖಲಾಗಲಿಲ್ಲ.