ಭಾಗಮಂಡಲ, ಅ. 2: ದಕ್ಷಿಣ ಭಾರತದ ಜೀವನದಿ, ಕೊಡಗಿನ ಕುಲಮಾತೆ, ಸಪ್ತ ಸಿಂಧು, ಲೋಕಪಾವನೆ, ಪಾಪನಾಶಿನಿ ಮುಂತಾದ ಹೆಗ್ಗಳಿಕೆಯೊಂದಿಗೆ ಈ ಪುಣ್ಯಭೂಮಿ ಕೊಡಗಿನ ತಲಕಾವೇರಿಯಲ್ಲಿ ಜಲರೂಪಿಣಿಯಾಗಿ ಉದ್ಭವಿಸುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಮತ್ತು ದಕ್ಷಿಣ ಕಾಶಿ, ದಕ್ಷಿಣ ಪ್ರಯಾಗವೆಂಬ ಹೆಮ್ಮೆಯ ಮೋಕ್ಷಪ್ರದಾಯಕ ಭಾಗಮಂಡಲ ತ್ರಿವೇಣಿ ಸಂಗಮ ಕ್ಷೇತ್ರಗಳನ್ನು ಸಂದರ್ಶಿಸಲು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 40 ಕಿ.ಮೀ. ನರಕದ ಮಾರ್ಗದಲ್ಲೇ ಸಾಗಬೇಕು.ಒಳಚರಂಡಿ ಕಾಮಗಾರಿಯಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಯಾವ ರಸ್ತೆಯಲ್ಲೂ ನೆಟ್ಟಗೆ ಹೇಗೆ ಸುತ್ತಾಡಲು ಸಾಧ್ಯವಿಲ್ಲವೋ, ಅದೇ ಪರಿಸ್ಥಿತಿಯಲ್ಲಿ ಹೊಂಡ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಅವಕಾಶವೇ ಸಿಗದ ನರಕದ ಹಾದಿಯಲ್ಲೇ ಭಾಗಮಂಡಲವನ್ನು ತಲಪಬೇಕಿದೆ.

ಇನ್ನೊಂದೆಡೆ ಇಲಾಖೆ ಅಥವಾ ಆಡಳಿತದ ಭ್ರಷ್ಟ ವ್ಯವಸ್ಥೆಗೆ ಭಾಗಮಂಡಲದಿಂದ ಅನತಿ ದೂರದ ಹೆದ್ದಾರಿಯಲ್ಲಿರುವ ಸೇತುವೆಯೊಂದು ಸಾಕ್ಷಿಯಾಗಿದೆ. ತೀರಾ ಇತ್ತೀಚಿನ ವರ್ಷಗಳಲ್ಲಿ ಪವಿತ್ರ ತೀರ್ಥಕ್ಷೇತ್ರಕ್ಕೆ ನಿತ್ಯ ಸಂಚರಿಸುವ ನೂರಾರು ವಾಹನಗಳ ಅನುಕೂಲಕ್ಕಾಗಿಯೇ ನಿರ್ಮಿಸಿರುವ ಸೇತುವೆ ಇದಾಗಿದೆ.

ಹಾಗಾಗಿ ಬಹಳ ವರ್ಷಗಳ ಹಿಂದಿನ ಕಿರಿದಾದ ಸೇತುವೆ ಸಂಚಾರಕ್ಕೆ ಅನಾನುಕೂಲವೆಂದು ಪರಿಗಣಿಸಿ ಲೋಕೋಪಯೋಗಿ ಇಲಾಖೆಯಿಂದ 65 ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಮಾಡಿ ನಿರ್ಮಿಸಿರುವ ಸೇತುವೆ ಇದು ಹೊಸತೇ ಆಗಿದ್ದರೂ, ಉದ್ಘಾಟನೆಗೊಳ್ಳುವ ಮುನ್ನ ಹಾಗೂ ವಾಹನಗಳ ಸಂಚಾರಕ್ಕೆ ಮೊದಲೇ ಕುಸಿದು ಹೋಗಿದೆ.

ಅನೇಕ ದಶಕಗಳ ಹಿಂದಿನ ಕಿರಿದಾದ ಸೇತುವೆಯ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಹೊಸ ಸೇತುವೆ ಕುಸಿದ ಬೆನ್ನಲ್ಲೇ ಕಾಮಗಾರಿಯ ದಿನಗಳಲ್ಲಿ ಸೇತುವೆ ಸಂಪರ್ಕ ಮಾರ್ಗಕ್ಕೆ ಅಡ್ಡಲಾಗಿ ಹಾಕಿರುವ ರಾಶಿ ರಾಶಿ ಮಣ್ಣು ಪ್ರಸಕ್ತ ಎರಡು ಕಡೆಗಳಲ್ಲಿ ಬೆಟ್ಟದಂತೆ ಭಾಸವಾಗಲಿದೆ.

ಕಳೆದ ಅನೇಕ ವರ್ಷಗಳಿಂದ ತುಲಾ ಸಂಕ್ರಮಣ ಜಾತ್ರೆಗೆ ಒಂದು ವಾರ ಮುಂಚಿತವಾಗಿ, ಮಾಮೂಲಿ ‘ನುಂಗಣ್ಣ’ ಕಾಯಕನಿರತರು ಸರಕಾರದ ಹಣ ದುರುಪಯೋಗಪಡಿಸುತ್ತಾ, ಅಲ್ಲಲ್ಲಿ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಲಕ್ಷಾಂತರ ರೂ. ಹಣ ವ್ಯಯದ ಲೆಕ್ಕ ತೋರಿಸುವದಷ್ಟೇ ಈ ದುರಸ್ಥಿ ಕೆಲಸ.

ನರಕಯಾತ್ರೆ: ಪ್ರಸಕ್ತ ಶ್ರೀಕಾವೇರಿ ಪುಷ್ಕರ ಸ್ನಾನದ ಸಂದರ್ಭದಲ್ಲಿ ತಾ. 12ರಂದು

(ಮೊದಲ ಪುಟದಿಂದ) ಮೊದಲನೆಯ ದಿನವೇ ಶ್ರೀಕ್ಷೇತ್ರಕ್ಕೆ ಹೊರರಾಜ್ಯದಿಂದ 150ಕ್ಕೂ ಅಧಿಕ ಬಸ್ಸುಗಳು, 200ಕ್ಕೂ ಅಧಿಕ ಕಾರು ಇತ್ಯಾದಿ ವಾಹನಗಳಲ್ಲಿ ಯಾತ್ರಾರ್ಥಿಗಳು ಈ ಮಾರ್ಗದಲ್ಲಿ ಸಾಗುತ್ತಿದ್ದ ಪರಿ ತೀರ್ಥಯಾತ್ರೆ ಮರೆತು ಹೋಗುವಷ್ಟು ನರಕಯಾತನೆ ನೀಡುವಂತಿತ್ತು.

ಹೊಂಡ ಗುಂಡಿಗಳ ನಡುವೆ ಪುಣ್ಯಕ್ಷೇತ್ರಕ್ಕೆ ತೆರಳಿ, ಅದೇ ಮಾರ್ಗದಲ್ಲಿ ಸುಮಾರು 40 ಕಿ.ಮೀ. ಹಿಂದಕ್ಕೆ ಸಾಗುವಾಗ ಹಿರಿಯ ಜೀವಗಳು, ತಾಯಂದಿಯರು ಅಮ್ಮಾ, ಅಪ್ಪಾ, ಸ್ವಾಮೀ... ಎಂಬಿತ್ಯಾದಿ ನೋವಿನಿಂದ; ವಾಹನಗಳ ಚಕ್ರಗಳು ಹೊಂಡ ಗುಂಡಿಯಲ್ಲಿಳಿಯುವಾಗ ಚೀರುತ್ತಾ, ಶಾಪ ಹಾಕುತ್ತಾ ತೆರಳುತ್ತಿದ್ದ ದೃಶ್ಯ ನಮ್ಮ ಕೊಡಗು ಅಥವಾ ಕಾವೇರಿ ಮಾತೆಗೆ ಆಡಳಿತ ವ್ಯವಸ್ಥೆ ಅಪಮಾನಗೊಳಿಸುವ ಅನುಭವವಾಗುತ್ತಿತ್ತು.

ಕಣ್ತೆರೆಯಲಿ: ಈ ಮಾರ್ಗದಲ್ಲಿ ನಿತ್ಯ- ನಿರಂತರ ಸಾಗುವ ವಾಹನಗಳು ಮತ್ತು ಯಾತ್ರಾರ್ಥಿಗಳ ಬವಣೆಯತ್ತ ನಮ್ಮ ಜಿಲ್ಲೆಯ ಮಂತ್ರಿಗಳು, ಶಾಸಕರು, ಜಿಲ್ಲಾಡಳಿತದೊಂದಿಗೆ ಸಂಬಂಧಿಸಿದ ಇಲಾಖೆಯವರು ಕಣ್ತೆರೆದು ನೋಡಬೇಕಿದೆ. ಕೇವಲ ಜಾತ್ರೆಯ ದಿನಗಳಲ್ಲಿ ಹಣವನ್ನು ನಿರರ್ಥಕವಾಗಿ ಗುಂಡಿ ಮುಚ್ಚಲು ದುಂದುವೆಚ್ಚ ಮಾಡದೆ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಿದೆ. ಅದು ಕರ್ತವ್ಯ ಕೂಡ.

ನೂರಾರು ವಾಹನ : ಕೊಡಗಿನ ಪವಿತ್ರ ಈ ತೀರ್ಥಕ್ಷೇತ್ರಕ್ಕೆ ನಿತ್ಯ 150ಕ್ಕೂ ಅಧಿಕ ಬಸ್ಸುಗಳು, 200ಕ್ಕೂ ಅಧಿಕ ಇತರ ವಾಹನಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಹೊರ ರಾಜ್ಯಗಳಿಂದ ಆಗಮಿಸಿ, ಹಿಂತೆರಳಿದ ಪರಿ ಅನುಭವಿಸಿದವರಿಗಷ್ಟೇ ಅರ್ಥವಾದೀತು. ತಲಕಾವೇರಿ ಮಾರ್ಗಬದಿ ಮಳೆಯಿಂದ ಕುಸಿದ ಬರೆಯ ಮಣ್ಣು ಕೂಡ ಹಾಗೆಯೇ ರಾಶಿ ಬಿದ್ದಿದೆ.

ಈ ಪುಣ್ಯಕ್ಷೇತ್ರಕ್ಕೆ ತೆರಳುವ ನರಕದ ಹಾದಿಯತ್ತ ಅರೆಕ್ಷಣವಾದರೂ ಜವಾಬ್ದಾರಿಯುತರು ಕಣ್ತೆರೆದು ನೋಡುವಂತಾಗಲಿ. ಜಾತ್ರೆಗೆ ಮುನ್ನ ರಸ್ತೆಗೆ ತುರ್ತು ಕಾಯಕ ದೊರಕಲಿ. ಅದು ಜವಾಬ್ದಾರಿಯುತರೆಲ್ಲರ ಕರ್ತವ್ಯ. -ಕೆ.ಡಿ. ಸುನಿಲ್.