ಸೋಮವಾರಪೇಟೆ, ಅ. 3: ರಾಜ್ಯ ಸರ್ಕಾರದ ಯೋಜನೆಯಾದ ಮಾತೃಪೂರ್ಣ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಇಲ್ಲಿನ ವೆಂಕಟೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ತಪ್ಪಿಸುವ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಲು ಈ ಯೋಜನೆ ಸಹಕಾರಿಯಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ದೊರಕುವ ಪೌಷ್ಟಿಕಾಂಶಯುಕ್ತ ಆಹಾರವನ್ನು ಗರ್ಭಿಣಿಯರು ಸೇವಿಸಬೇಕು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ವೈದ್ಯರಾದ ಸುಪರ್ಣ ಕೃಷ್ಣಾನಂದ್ ಮಾತನಾಡಿ, ಗರ್ಭಿಣಿಯಾದ ತಕ್ಷಣ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಆರೋಗ್ಯ ಕಾರ್ಯಕರ್ತೆ ಯಿಂದ ತಾಯಿ ಕಾರ್ಡ್ ಪಡೆಯಬೇಕು. ಈ ಸಂದರ್ಭದಲ್ಲಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಆಗಾಗ್ಗೆ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸುತ್ತಾ, ಪೌಷ್ಟಿಕಾಂಶದ ಆಹಾರ ಸೇವಿಸಬೇಕು ಎಂದರು.
ಆರೋಗ್ಯ ಕಾರ್ಯಕರ್ತೆ ಅನಿತಾ ಮಾತನಾಡಿ, ತಾಯಿ-ಮಗುವಿನ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು.
ಮಾತೃಪೂರ್ಣ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೀಲಾ ಅವರು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಮುಂದಿನ ದಿನಗಳಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಯನ್ನು ಸರ್ಕಾರ ಜಾರಿಗೆ ತಂದಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಅನ್ನ, ಸಾಂಬಾರ್, ಹಾಲು, ಮೊಟ್ಟೆ, ಕಡ್ಲೆ ಚಿಕ್ಕಿ ನೀಡಲಾಗುತ್ತಿದ್ದು, ಫಲಾನುಭವಿಗಳು ಪ್ರತಿದಿನ ಕೇಂದ್ರಕ್ಕೆ ತೆರಳಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸದಸ್ಯೆ ಸುಶೀಲ, ಲೀಲಾ ನಿರ್ವಾಣಿ, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಮಹಿಳಾ ಮೇಲ್ವಿಚಾರಕಿ ಶೈಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.