ಗೋಣಿಕೊಪ್ಪಲು, ಅ. 3: ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ಹಾಕಿ ಇಂಡಿಯಾ ಸಹಯೋಗದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ವಯೋಮಿತಿಯ ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್‍ನಲ್ಲಿ ಹಾಕಿ ಕೂರ್ಗ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದೆ.
ಅಲ್ಲಿನ ಎಸ್‍ಎನ್‍ಬಿಪಿ ಶಾಲಾ ಮೈದಾನದಲ್ಲಿ ಮಲ್ವಾ ಖಾಲ್ಸಾ ಅಕಾಡೆಮಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು. ಹಾಕಿಕೂರ್ಗ್ ಪರ ಗ್ಯಾನ್ ಗಣಪತಿ 2, ಪೂವಣ್ಣ ಹಾಗೂ ಹಮಿನ್ಸ್ ತಲಾ 1 ಗೋಲು ಹೊಡೆದು ಮಿಂಚಿದರು. ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದಿ ಹಾಕಿಕೂರ್ಗ್ ಆಟಗಾರ ನಿಖಿಲ್ ಜೋಸೆಫ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹಾಕಿಕೂರ್ಗ್ ಹಾಕಿ ಸಂಗಾಳಿ ವಿರುದ್ಧ 8-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಹಾಕಿಕೂರ್ಗ್ ಪರ ಮೊಹಮದ್ ಹಮೀಜ್ ಹ್ಯಾಟ್ರಿಕ್ ಗೋಲು ಹೊಡೆದರು. ಗೌತಂ, ಅಖಿಲ್, ಹರ್ಷ, ರಕ್ಷಿತ್ ಕಾರ್ಯಪ್ಪ ಹಾಗೂ ತರುಣ್ ತಲ 1 ಗೋಲು ಹೊಡೆದರು. ತಂಡದೊಂದಿಗೆ ತರಬೇತುದಾರರಾಗಿ ಬುಟ್ಟಿಯಂಡ ಚೆಂಗಪ್ಪ ಹಾಗೂ ಬೊಳ್ಳಚಂಡ ನಾಣಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಹಾಕಿಕೂರ್ಗ್ ವತಿಯಿಂದ ತಾ. 11 ರಿಂದ ನಡೆಯುವ ಬಿ, ಹಾಗೂ ಎ ಡಿವಿಜನ್ ಹಾಕಿ ಲೀಗ್‍ನಲ್ಲಿ 34 ತಂಡಗಳು ಪಾಲ್ಗೊಳ್ಳಲಿವೆ ಎಂದು ಹಾಕಿಕೂರ್ಗ್ ಪ್ರಕಟಣೆ ತಿಳಿಸಿದೆ.
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ತಾ. 11 ರಿಂದ 16 ರವರೆಗೆ ಮೊದಲ ವಿಭಾಗದಲ್ಲಿ ನಡೆಯುವ ಬಿ ಡಿವಿಜನ್ ಹಾಕಿ ಲೀಗ್‍ನಲ್ಲಿ 18 ತಂಡಗಳು ಸೆಣೆಸಾಟ ನಡೆಸಲಿವೆ. ಇದರಲ್ಲಿ 4 ತಂಡಗಳನ್ನು ಆಯ್ಕೆ ಮಾಡಿ ನಂತರ ನಡೆಯುವ ಎ ಡಿವಿಜನ್ ಹಾಕಿ ಟೂರ್ನಿಯಲ್ಲಿ ಆಡಿಸಲಾಗುವದು.
ಬಿ ಡಿವಿಜನ್‍ನಲ್ಲಿ ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಗುಂಡ್ಯತ್ ಅಯ್ಯಪ್ಪ, ಜ. ತಿಮ್ಮಯ್ಯ ಅಕಾಡೆಮಿ, ಪಾರಾಣೆ ಕಿರ್‍ಂದಾಡ್, ಪೊದ್ದ್‍ಮಾನಿ ಬ್ಲೂಸ್ಟಾರ್, ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಜೂನಿಯರ್, ಸ್ಪೋಟ್ರ್ಸ್ ಹಾಸ್ಟೆಲ್ ಜೂನಿಯರ್, ಮರ್ಕರಾ ಯುನೈಟೆಡ್, ಹುದಿಕೇರಿ ಮಲ್ನಾಡ್, ಸ್ಪೋಟ್ರ್ಸ್ ಹಾಸ್ಟೆಲ್ ಸೀನಿಯರ್, ವೀರಾಜಪೇಟೆ ಎಫ್‍ಎಮ್‍ಸಿ, ಬೇತು ಯೂತ್ ಕ್ಲಬ್, ಕುಂದಾ ಬೊಟ್ಟಿಯತ್‍ನಾಡ್, ಬಲಮುರಿ ಮಹಾದೇವ ಯೂತ್ ಕ್ಲಬ್, ಬಿ.ಶೆಟ್ಟಿಗೇರಿ ಡ್ರಿಬ್ಲರ್ಸ್ ಹೆಂಪ್, ವೀರಾಜಪೇಟೆ ಕೊಡವ ಸಮಾಜ ಕ್ಲಬ್, ಗೋಣಿಕೊಪ್ಪ ಕಾಲ್ಸ್, ಕೂಡಿಗೆ ಸ್ಪೋಟ್ರ್ಸ್ ಸ್ಕೂಲ್ ತಂಡಗಳು ಪಾಲ್ಗೊಳ್ಳುತ್ತಿವೆ.
ಎ ಡಿವಿಜನ್ ಟೂರ್ನಿಯಲ್ಲಿ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಸೀನಿಯರ್, ಅಮ್ಮತ್ತಿ ಈಗಲ್ಸ್, ಮೂರ್ನಾಡು ಎಮ್‍ಆರ್‍ಎಫ್, ಬೇಗೂರು ಇವೈಸಿ, ಕೋಣನಕಟ್ಟೆ ಇಲೆವೆನ್, ಮಡಿಕೇರಿ ಚಾರ್ಮರ್ಸ್, ಕಾಕೋಟುಪರಂಬು ಎಸ್‍ಆರ್‍ಸಿ, ಬಿಬಿಸಿ, ಡಾಲ್ಫಿನ್ಸ್, ಹಾತೂರು ಯೂತ್ ಕ್ಲಬ್, ವೀರಾಜಪೇಟೆ ಟವರ್ಸ್ ಇಲೆವೆನ್ ಹಾಗೂ ಬಾಡಗ ಆರ್‍ಎಸ್‍ಸಿ ತಂಡಗಳು ಸೆಣೆÉಸಾಟ ನಡೆಸಲಿವೆ ಎಂದು ಪಂದ್ಯಾವಳಿ ನಿರ್ದೇಶಕ ನೆಲ್ಲಮಕ್ಕಡ ಪವನ್ ತಿಳಿಸಿದ್ದಾರೆ.