ಮಡಿಕೇರಿ, ಅ. 3: ಆಸ್ತಿಗೆ ಸಂಬಂಧಿಸಿದ ಪಹಣಿ ಪತ್ರದಲ್ಲಿ ಕುಟುಂಬಸ್ಥರ 4-5 ಹೆಸರುಗಳಿರು ವವರಿಗೆ ಸಹಕಾರಿ ಸಂಘಗಳಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಂತಹ ರೈತರಿಗೆ ಕಂದಾಯ ಇಲಾಖೆ ಹಿಡುವಳಿ ಪತ್ರ ನೀಡಿದಲ್ಲಿ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮಕ್ಕಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಅಭಿಪ್ರಾಯಪಟ್ಟರು.

ಸಂಘದ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವೊಂದು ಕುಟುಂಬಗಳ ಆಸ್ತಿ ಪಹಣಿ ಪತ್ರದಲ್ಲಿ ಹೆಚ್ಚಿಗೆ ಹೆಸರುಗಳಿದ್ದು, ಪ್ರತ್ಯೇಕ ಪಹಣಿ ಆಗಿರುವದಿಲ್ಲ. ಇಂತಹ ಸಂದರ್ಭ ಗಳಲ್ಲಿ ಸೌಲಭ್ಯ ಹೊಂದಲು ಎಲ್ಲರ ಸಹಿ ಅಗತ್ಯವಿರುತ್ತದೆ. ಕೆಲವು ಸಂದರ್ಭ ವ್ಯಾಜ್ಯಗಳಿಂದಾಗಿ ಒಬ್ಬರು ಸಹಿ ಮಾಡದಿದ್ದರೂ ಸೌಲಭ್ಯ ಸಿಗುವದಿಲ್ಲ. ಹಾಗಾಗಿ ಪಹಣಿ ಪತ್ರದ ಆಧಾರದಲ್ಲಿ ಓರ್ವರಿಗೆ ಇಂತಿಷ್ಟು ಆಸ್ತಿ ಇದೆ ಎಂದು ಕಂದಾಯ ಇಲಾಖೆ ಹಿಡುವಳಿ ಪತ್ರ ನೀಡಿದ್ದಲ್ಲಿ ಅಂತಹ ರೈತರಿಗೆ ಸೌಲಭ್ಯ ಹೊಂದಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂಘದಲ್ಲಿ 1158 ಮಂದಿ ಸದಸ್ಯರಿದ್ದು, ಈ ಬಾರಿ ರೂ. 16,49,303 ರಷ್ಟು ಲಾಭಗಳಿಸಿದೆ. ಲಾಭದ ಮೊತ್ತದಲ್ಲಿ ಸದಸ್ಯರಿಗೆ ಶೇ. 9.1 ರಷ್ಟು ಡಿವಿಡೆಂಡ್ ನೀಡಲಾಗಿದೆ. ಸದಸ್ಯರ ಭತ್ಯೆಯನ್ನು ಕೂಡ ರೂ. 200ಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆಯಡಿ ಸಂಘದ ಸದಸ್ಯರ ಒಟ್ಟು ರೂ. 1,57,29,354 ಮೊತ್ತದಷ್ಟು ಸಾಲ ಮನ್ನಾ ಆಗಿರುವದಾಗಿ ಮಾಹಿತಿ ನೀಡಿದರು.

ಸಂಘದ ವತಿಯಿಂದ ಮರಣ ನಿಧಿ ಸ್ಥಾಪಿಸಿದ್ದು, ಸದಸ್ಯರು ರೂ. 5 ಸಾವಿರ ಪಾವತಿಸಬೇಕಿದೆ. ಸಂಘದ ವತಿಯಿಂದ ನೂತನ ಸಭಾಂಗಣ, ವಸತಿಗೃಹ ನಿರ್ಮಿಸಿದ್ದು, ಇದೀಗ ಎರಡನೇ ಅಂತಸ್ತು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಸದಸ್ಯರ ಅನುಮತಿ ಕೋರಿದ ಸಂದರ್ಭ ಸರ್ವಾನುಮತದ ಒಪ್ಪಿಗೆ ದೊರೆಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚೌಕಿರ ತಿಮ್ಮಯ್ಯ, ನಿರ್ದೇಶಕರು ಗಳಾದ ಶಾಂತೆಯಂಡ ದೇವರಾಜ್, ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಪಿ.ಎಂ. ಸುಲೋಚನ, ಉಕ್ಕೇರಂಡ ನೀಲಮ್ಮ, ಪಡೇಟಿರ ಕವಿತ, ಹೆಚ್.ಟಿ. ರಮೇಶ್, ತರಮ್‍ನಾಜ್, ಕಾರ್ಯನಿರ್ವ ಣಾಧಿಕಾರಿ ಸಿ.ಟಿ. ಕುಟ್ಟಪ್ಪ, ಸಿಬ್ಬಂದಿಗಳಾದ ಎಂ.ಎಸ್. ಶೋಭಾ ವತಿ, ಎಂ.ಎಸ್. ವಿಜಯ ಕುಮಾರ್, ಸಂತೋಷ್, ಕೆ.ಪಿ. ಪೂರ್ಣಿಮಾ, ಬಿ.ವಿ. ನೇತ್ರ, ಇದ್ದರು. ನಿರ್ದೇಶಕ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿದರೆ, ಕುಂಬಗೌಡನ ಪ್ರಸನ್ನ ವಂದಿಸಿದರು.