ಮಡಿಕೇರಿ, ಅ. 3: ಚೆಟ್ಟಳ್ಳಿ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ವಿವರಣೆ ಸಹಿತ ಮಾಹಿತಿಯನ್ನಿತ್ತರು. 2016-17ನೇ ಸಾಲಿನಲ್ಲಿ ಸಂಘವು ರೂ. 23,49,278 ನಿವ್ವಳ ಲಾಭದೊಂದಿಗೆ ಸದಸ್ಯರಿಗೆ ಶೇ.12ರ ಲಾಭಾಂಶ ಹಂಚಲಿದೆಯೆಂದೂ ತಿಳಿಸಿದರು. ಸಂಘದ ಆಡಳಿತ ಕಚೇರಿಯ ಕಟ್ಟಡಗಳ ಸಾಲವನ್ನು ಸಂಪೂರ್ಣವಾಗಿ ತೀರಿಸಲಾಗಿದೆಯೆಂದೂ, ಜಾಗದ ಬಗ್ಗೆ ಬಾಕಿ ಇರುವ ಪ್ರಕರಣಗಳು ಸದ್ಯದಲ್ಲೇ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗುವದರಲ್ಲಿದೆ ಎಂದು ವಿವರಿಸಿದರು.
ಶ್ರೀ ನರೇಂದ್ರ ಮೋದಿ ಸಹಕಾರ ಭವನದ ಪಕ್ಕದಲ್ಲಿರುವ ಖಾಲಿ ಜಾಗದ ಬಗ್ಗೆ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದ್ದು, ಈಗ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದ್ದು, ರಾಜಕೀಯ ಪಿತೂರಿ, ಕೆಲವು ಪಂಚಾಯಿತಿ ಸದಸ್ಯರ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸುತ್ತಾ, ರೈತರ ಹಿತದೃಷ್ಟಿಯಿಂದ ತಾನು ಈ ಜಾಗವನ್ನು ಸಂಘದ ಸುಪರ್ದಿಗೆ ತರಲು ಹೋರಾಟ ಮುಂದುವರೆಸುವದಾಗಿ ಮಹಾಸಭೆಗೆ ಭರವಸೆಯನ್ನಿತ್ತರು.
ಈ ಸಂಬಂಧ ಸಂಘದ ಸದಸ್ಯ ಕಾಫಿ ಬೆಳೆಗಾರರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಲ್ಲಾರಂಡ ಜಾಲಿ ತಮ್ಮಯ್ಯ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸದಸ್ಯರನ್ನು ಸದಸ್ಯತ್ವದಿಂದ ಕಿತ್ತುಹಾಕಬೇಕೆಂದು ಒತ್ತಾಯಿಸಿದರು.
ಚೇರಳತಮ್ಮಂಡ ಆನಂದ ಈ ಬಗ್ಗೆ ಸಹಮತ ಸೂಚಿಸಿದಾಗ ಸಂಘದ ಏಳಿಗೆ ಸಹಿಸದ ಒಂದೆರಡು ಸದಸ್ಯರೊಂದಿಗೆ ಮಾತಿನ ಚಕಮಕಿಯೂ ನಡೆದ ಘಟನೆ ನಡೆದವು. ರೈತ ಸಮುದಾಯ ಭವನಕ್ಕೆ ಧನ ಸಹಾಯ ಮಾಡಿದ ದಾನಿಗಳಿಗೆ ಈ ಸಂದರ್ಭ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳೂ, ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಹರಿಣಿ, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಹೆಚ್.ಬಿ. ರಮೇಶ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಇದ್ದರು.
ಕೆ.ಎಸ್. ನಂದಿನಿ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ ವಂದಿಸಿದರು.