ಮಡಿಕೇರಿ, ಅ.2 : ಈಗಾಗಲೇ ದೇಶ ವಿದೇಶದ ಜನರ ಮನಗೆದ್ದಿರುವ ಕೊಡಗಿನ ಸ್ವಾದಿಷ್ಟಕರ ಕಾಫಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಕಾವೇರಿನಾಡಿನ ಕಾಫಿಯ ರುಚಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ. ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಂಘದ ಪ್ರಮುಖರು ರುಚಿಕರ ಕಾಫಿ ತಯಾರಿಕೆಯ ಬಗ್ಗೆಯೂ ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದರು.
ಮಡಿಕೇರಿ ದಸರಾ ನೋಡಲು ಬಂದ ಸಾವಿರಾರು ಪ್ರವಾಸಿಗರನ್ನು ಸಂಜೆ ಸ್ವಾಗತಿಸಿದ್ದು ವರುಣ. ಕೊಡಗು ಜಿಲ್ಲಾ ಬೆಳೆಗಾರರ ಸಂಘ ಉಚಿತವಾಗಿ ನೀಡಿದ ಬಿಸಿಬಿಸಿ ಕಾಫಿ, ಮಳೆಯಲ್ಲಿ ನೆನೆದು, ಚುಮುಚುಮು ಚಳಿಯಲ್ಲಿ ನಡುಗುತ್ತಿದ್ದವರ ದಿಲ್ಖುಷ್ ಮಾಡಿತು. ನಗರದ ರಾಜಾಸೀಟು ರಸ್ತೆಯ ಕಾಫಿ ಕೃಪಾ ಕಟ್ಟಡದ ಬಳಿ ನಡೆದ ಅಂತರ್ರಾಷ್ಟ್ರೀಯ ಕಾಫಿ ದಿನವನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗಿನ ಕಾಫಿಗೆ ಮತ್ತಷ್ಟು ಪ್ರೋತ್ಸಾಹದ ಅಗತ್ಯವಿದ್ದು, ಅಂತರ್ರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಾರ್ಯವೂ ಆಗಬೇಕಾಗಿದೆ ಎಂದರು.
ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ಎಂ. ದಿನೇಶ್ ಮಾತನಾಡಿ ಸ್ವಾದಿಷ್ಟಕರ ಕಾಫಿ ತಯಾರಿಕೆಯ ಕುರಿತು ಮಾಹಿತಿ ನೀಡಿದರು. ಚಿಕೋರಿ ಬಳಕೆಯಿಂದ ಕಾಫಿಯ ನೈಜ ರುಚಿ ಮರೆಯಾಗುತ್ತದೆ ಎಂದು ತಿಳಿಸಿದ ಅವರು ರುಚಿಕರ ವಾದ ಕಾಫಿಯನ್ನು ಪರಿಚಯಿಸುವ ದರಿಂದಲೇ ಕಾಫಿಯ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು. ಶೇ.70 ರಷ್ಟು ಅರೆಬಿಕಾ ಹಾಗೂ ಶೇ.30 ರಷ್ಟು ರೊಬಸ್ಟಾ ಕಾಫಿಯನ್ನು ಬೆರೆಸಿ ತಯಾರಿಸಿದ ಕಾಫಿಪೇಯ ಸೇವಿಸಲು ರುಚಿಕರವಾಗಿರುತ್ತದೆ. ಯಾವದೇ ಕಾರಣಕ್ಕೂ ಚಿಕೋರಿ ಬೆರೆಸಬೇಡಿ ಎಂದು ದಿನೇಶ್ ಸಲಹೆ ನೀಡಿದರು.
ಉಪಾಧ್ಯಕ್ಷ ಕಾಯಪಂಡ ಕೆ. ತಮ್ಮಯ್ಯ, ಕಾರ್ಯದರ್ಶಿ ಶಿವಶಂಕರ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದು ಕಾಫಿದಿನವನ್ನು ಅರ್ಥ ಪೂರ್ಣಗೊಳಿಸಿದರು. ಬೆಳೆಗಾರರ ಸಂಘ 18 ಸಾವಿರಕ್ಕೂ ಅಧಿಕ ಮಂದಿ ಪ್ರವಾಸಿಗರಿಗೆ ಉಚಿತವಾಗಿ ಕಾಫಿ ಪೇಯ ನೀಡಿದರಲ್ಲದೆ ಕಾಫಿ ಹುಡಿಯನ್ನು ಕೂಡ ವಿತರಿಸಿದರು.