ವೀರಾಜಪೇಟೆ, ಅ. 4: ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರದ ಯೋಜನೆಗಳೆಂದು ಪ್ರಚಾರ ಗಿಟ್ಟಿಸಿಕೊಂಡು ಕಾಂಗ್ರೆಸ್ ಪಕ್ಷದ ಸರಕಾರ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಪೂರ್ಣ ವಾಗಿ ವೈಫಲ್ಯವನ್ನು ಕಂಡಿದೆ. ಹಂತ ಹಂತಗಳಲ್ಲಿಯೂ ಈ ಸರಕಾರದ ಪ್ರಭಾವದಿಂದ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡುತ್ತಿದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.ವೀರಾಜಪೇಟೆಯ ಕಾರು ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಸಮಿತಿ ಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ಸಾಧನೆಗಳ ಅರಿವು ಮೂಡಿಸುವ ಕಾರ್ಯಕ್ರಮದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರದ ಮೂರೂವರೆ ವರ್ಷಗಳ ಸಾಧನೆ ಗಳನ್ನು ಅವಲೋಕಿಸಿದರೆ ರಾಜ್ಯ ಸರಕಾರದ ಸಾಧನೆಗಳು ಶೂನ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಂತರ ಭ್ರಷ್ಟ ಆಡಳಿತ, ಜನ ವಿರೋಧಿ ನೀತಿ, ದುರಾಡಳಿತ, ಆಡಳಿತ ವೈಫಲ್ಯ ಸರಕಾರದ ಇಲಾಖೆ ಗಳಲ್ಲಿ ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದಿಂದ ಜನತೆ ಬೇಸತ್ತಿದ್ದಾರೆ. ರೈತರ ಬಗ್ಗೆ ಕೇಂದ್ರ ಸರಕಾರ ವಹಿಸಿರುವ ಕಾಳಜಿ ರಾಜ್ಯ ಸರಕಾರ ಕ್ಕಿಲ್ಲ. ಕೇಂದ್ರದ ಜನಪರ ಒಂದೊಂದು ಯೋಜನೆ ಗಳನ್ನು ರಾಜ್ಯ ಸರಕಾರ ತನ್ನದೇ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ದೂರಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇವಲ ಅಬ್ಬರದ ಪ್ರಚಾರದಲ್ಲಿ ರಾಜ್ಯ ಸರಕಾರ ಮುಂದಿದೆ. ಕಾಂಗ್ರೆಸ್ ಪಕ್ಷ ತನ್ನ ಸಾಧನೆಗಳನ್ನು ಜನತೆಯತ್ತ ಕೊಂಡೊಯ್ದು ಚುನಾವಣೆಯನ್ನು ಎದುರಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಆಡಳಿತದಲ್ಲಿ ಕೊಡಗಿನ ಗಣಪತಿ ಸೇರಿದಂತೆ ಇಬ್ಬರು ಡಿ.ವೈ.ಎಸ್.ಪಿ ಹಾಗೂ 31 ಮಂದಿ ಅಧಿಕಾರಿಗಳು, ಸಿಬ್ಬಂದಿಗಳು ಆತ್ಮಹತ್ಯೆಗೊಳ ಗಾಗಿದ್ದಾರೆ. ಇದರ ತನಿಖೆಯ ಹಗರಣದಲ್ಲಿ ಸಚಿವರನ್ನು ಆರೋಪ ಮುಕ್ತ ಮಾಡಲಾಗಿದೆ ಎಂದು ದೂರಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ

(ಮೊದಲ ಪುಟದಿಂದ) ಪ್ರತಿ ಹಂತದಲ್ಲೂ ಭ್ರಷ್ಟಚಾರದಲ್ಲಿ ಮುಳುಗಿರುವ ರಾಜ್ಯ ಸರಕಾರ ಕೇಂದ್ರದಿಂದ ಜಾರಿಯಾಗುವ ಎಲ್ಲಾ ಯೋಜನೆಗಳನ್ನು ತನ್ನದೇ ಎಂದು ಹೇಳಿಕೊಳ್ಳುತ್ತಿದೆ. ಕೊಡಗು ಜಿಲ್ಲೆಗೆ ಸೂಕ್ತ ರೀತಿಯ ಅನುದಾನ ದೊರಕದೆ ರಸ್ತೆಗಳು ಹೀನಾಯ ಸ್ಥಿತಿಯಲ್ಲಿದ್ದು, ಎಲ್ಲ ರೀತಿಯಲ್ಲ್ಲಿಯೂ ಅಭಿವೃದ್ಧಿ ಕುಂಠಿತಗೊಂಡಿದೆ. ಗಾಂಧಿ ಜಯಂತಿಯಂದು ರಾಜ್ಯ ಸರಕಾರ ಜಾರಿಗೆ ತಂದಿರುವ ಮಾತೃ ಯೋಜನೆ ಪೂರ್ಣವಾಗಿ ವಿಫಲಗೊಂಡಿದೆ. ಇದಕ್ಕಾಗಿ ಪೌಷ್ಠಿಕ ಆಹಾರಕ್ಕಾಗಿ ಗರ್ಭಿಣಿ ಹಾಗೂ ಬಾಣಂತಿಯರನ್ನು ಕರೆ ತರಲು ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಉಪಾಧ್ಯಕ್ಷ ರಘು ನಾಣಯ್ಯ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಫಡರೇಶನ್ ಅಧ್ಯಕ್ಷ ಜಪ್ಪು ಅಚ್ಚಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಬಿ.ರಾಜು. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ. ಇ.ಸಿ. ಜೀವನ್, ಅನಿಲ್ ಮಂದಣ್ಣ, ಬಿ.ಕೆ.ಜೀವನ್, ಯೋಗೀಶ್ ನಾಯ್ಡು, ಟಿ.ಜೆ. ದಿವಾಕರ್ ಶೆಟ್ಟಿ, ಜೋಕಿಂ ಮತ್ತಿತರರು ಉಪಸ್ಥಿತರಿದ್ದರು.