ಕುಶಾಲನಗರ, ಅ. 4 : ಚಿಕ್ಕ ಅಳುವಾರ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಜೀವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಆಶ್ರಯದಲ್ಲಿ ತಾ. 6 ರಿಂದ ಎರಡು ದಿನಗಳ ರಾಷ್ಟ್ರಮಟ್ಟದ ವಿಜ್ಞಾನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಪ್ರಭಾರ ನಿರ್ದೇಶಕÀ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಪುನರುಜ್ಜೀವನ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅಂತರ್ರಾಷ್ಟ್ರೀಯ ಮಟ್ಟದ ಪ್ರಖ್ಯಾತ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಯುರ್ವೇದ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ.
ಹೆಚ್ಚುತ್ತಿರುವ ಆಧುನಿಕ ಔಷಧಿ ಪದ್ಧತಿಗಳು ಕೆಲವೊಮ್ಮೆ ರೋಗ ಗುಣಪಡಿಸುವ ಬದಲು ರೋಗಿಗಳಿಗೆ ಮಾರಕವಾಗುವದಲ್ಲದೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಅನಾದಿ ಕಾಲದಿಂದಲೂ ಬಳಕೆಯಲ್ಲಿದ್ದ ಆಯುರ್ವೇದ ಚಿಕಿತ್ಸೆಗಳು ಕಣ್ಮರೆಯಾಗುತ್ತಿವೆ. ಯಾವದೇ ದುಷ್ಪರಿಣಾಮಗಳಿಲ್ಲದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಹೆಚ್ಚು ಬಳಕೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜಾಗೃತಿ ಮೂಡಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮ ಸಂಚಾಲಕ ಡಾ. ಕೆ.ಎಸ್.ಚಂದ್ರಶೇಖರಯ್ಯ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಬೈರಪ್ಪ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪದ್ಮಭೂಷಣ ಪುರಸ್ಕøತ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾದ ಪ್ರೊ. ಜಿ. ಪದ್ಮನಾಭನ್ ಮುಖ್ಯ ಅತಿಥಿಯಾಗಿ ಆಗಮಿಸಿ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಜೀವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಕೆ. ಧರ್ಮಪ್ಪ ಮಾತನಾಡಿ, ದೇಶದ ಹೆಸರಾಂತ ವಿಜ್ಞಾನಿಗಳಾದ ಪ್ರೊ. ಎ. ಆರ್. ರೆಡ್ಡಿ, ಪ್ರೊ. ಡಿ. ವೇಲು ಮುರುಗನ್, ಪ್ರೊ. ಬಿ.ಎಸ್. ವಿಶ್ವನಾಥ್, ಪ್ರೊ. ಲಲಿತ ಆರ್. ಗೌಡ ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿ ದ್ದಾರೆ ಎಂದು ತಿಳಿಸಿದರು.
ಕೇಂದ್ರದ ಕನ್ನಡ ಉಪನ್ಯಾಸಕರಾದ ಜಮೀರ್ ಅಹಮ್ಮದ್ ಇದ್ದರು.