ಮಡಿಕೇರಿ, ಅ. 4: ಗೋಣಿಕೊಪ್ಪಲುವಿನ ಕಾವೇರಿ ಮಹಿಳಾ ಸಮಾಜದ ಆಡಳಿತ ಮಂಡಳಿ ವಿಚಾರದಲ್ಲಿ ಕಳೆದ ಕೆಲವು ಸಮಯದಿಂದ ಗೊಂದಲ ಸೃಷ್ಟಿಯಾಗಿರುವ ಕುರಿತು ತಿಳಿದು ಬಂದಿದೆ. ಸದ್ಯದ ಮಟ್ಟಿಗೆ ಹಿಂದಿನ ಆಡಳಿತ ಮಂಡಳಿ ವಿಸರ್ಜನೆಗೊಂಡಿದ್ದರೂ, ಇನ್ನೂ ಅಧಿಕೃತವಾಗಿ ಹೊಸ ಆಡಳಿತ ಮಂಡಳಿ ರಚನೆಯಾಗಿಲ್ಲ. ಆದರೆ ಕೆಲವರು ಕಾನೂನುಬಾಹಿರವಾಗಿ ಹೊಸ ಆಡಳಿತ ಮಂಡಳಿಯನ್ನು ರಚಿಸಿಕೊಂಡಿದ್ದಾರಂತೆ. ಹಿಂದಿನ ಅಧ್ಯಕ್ಷೆ ಇನ್ನೂ ಅಧಿಕಾರ ಹಸ್ತಾಂತರಿಸಿಲ್ಲ. ಅಲ್ಲದೆ ನಿಯಮಾನುಸಾರ ಯಾವದೇ ಪ್ರಕ್ರಿಯೆ ನಡೆದಿಲ್ಲ ಎಂಬದು ಗೋಣಿಕೊಪ್ಪಲುವಿನಲ್ಲಿ ಇದೀಗ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಇದು ಒಂದೆಡೆಯಾದರೆ ಈ ಬೆಳವಣಿಗೆಯ ನಡುವೆ ಕೂಲಿ ಕಾರ್ಮಿಕರೊಬ್ಬರು ಸಂಕಷ್ಟ ಅನುಭವಿಸಿದ ಪ್ರಸಂಗವೊಂದು ನಡೆದಿದೆ.

ಗೋಣಿಕೊಪ್ಪಲುವಿನ 3ನೇ ವಿಭಾಗದ ನಿವಾಸಿ ಹೆಚ್.ಆರ್. ಮಂಜುನಾಥ್ ಅವರು ಹಿಂದಿನ ಅಧ್ಯಕ್ಷೆಯಿದ್ದ ಸಂದರ್ಭ ಮಗಳ ಹಸೆಮಣೆ ಶಾಸ್ತ್ರ ಸಮಾರಂಭಕ್ಕೆಂದು ಕಾವೇರಿ ಮಹಿಳಾ ಸಮಾಜದ ಸಭಾಂಗಣವನ್ನು ರೂ. 650 ಹಣ ಪಾವತಿಸಿ ನಿಗದಿಮಾಡಿಕೊಂಡಿದ್ದರು. ಸೆಪ್ಟೆಂಬರ್ 27 ರಂದು ಸಮಾರಂಭ ನಿಗದಿಯಾಗಿತ್ತು. ಮನೆಯಲ್ಲಿ ಶಾಸ್ತ್ರ ಮುಗಿದ ಬಳಿಕ ಮಹಿಳಾ ಸಮಾಜದಲ್ಲಿ ಊಟದ ವ್ಯವಸ್ಥೆಗೆ ಅವರು ಸಿದ್ಧತೆ ಮಾಡಿಕೊಂಡಿದ್ದರು.

ಬಂಧುಮಿತ್ರರು ಸೇರಿ ಇಲ್ಲಿಗೆ ಆಗಮಿಸುವ ವೇಳೆಗೆ ಹಿಂದಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಬೋಜಮ್ಮ ಹಾಗೂ ಉತ್ತರೆ ಎಂಬವರು ದಿಢೀರನೆ ತೆರಳಿ ಇಲ್ಲಿ ಸಮಾರಂಭ ನಡೆಸಲು ಅನುಮತಿ ನೀಡಿದವರಾರು ಎಂದು ಪ್ರಶ್ನಿಸಿ ನಮಗೆ ರೂ. 2500 ಹಣ ಪಾವತಿಸಿದರೆ ಮಾತ್ರ ಸಮಾರಂಭ ನಡೆಸಬಹುದು ಇಲ್ಲದಿದ್ದಲ್ಲಿ ವಾಪಾಸ್ಸು ತೆರಳಿ ಎಂದು ಗೇಟ್‍ಗೆ ಬೀಗ ಜಡಿದಿದ್ದಾರೆ ಎಂದು ಮಂಜುನಾಥ್ ಅವರು ಅವಲತ್ತುಕೊಂಡಿದ್ದಾರೆ.

ಈ ಬಗ್ಗೆ ಅವರು ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷೆಯಾಗಿದ್ದ ಚೇಂದಂಡ ಸುಮಿ ಸುಬ್ಬಯ್ಯ ಅವರಿಗೆ ಪತ್ರ ಬರೆದಿದ್ದು, ಬಡ ಕೂಲಿ ಕಾರ್ಮಿಕನಾದ ನಾನು ಹಣ ಪಾವತಿಸಲು ಸಮಯಾವಕಾಶ ನೀಡುವಂತೆ ಕೋರಿಕೊಂಡರೂ ಮನವೀಯತೆ ತೋರದೆ ಮಾಡಿದ ಆಹಾರ ಪದಾರ್ಥಗಳೆಲ್ಲ ಹಾಳಾಗಿದೆ. ಬಂಧುಗಳು ಬೇಸರಗೊಂಡು ವಾಪಾಸ್ಸು ತೆರಳಿದ್ದು ತನಗೆ ಅವಮಾನವಾಗಿದೆ. ರೂ. 15 ಸಾವಿರದಷ್ಟು ನಷ್ಟವಾಗಿದ್ದು, ಇದನ್ನು ಮಹಿಳಾ ಸಮಾಜದಿಂದ ಭರಿಸಿಕೊಡಬೇಕಾಗಿ ಕೋರಿಕೊಂಡಿದ್ದಾರೆ.

ಆಡಳಿತ ಮಂಡಳಿಯ ಗೊಂದಲದ ಬಿಸಿ ತಟ್ಟಿರುವದು ಪಾಪದ ವ್ಯಕ್ತಿಗೆ. ಇದಕ್ಕೆ ಏನನ್ನಬೇಕು ಎಂಬದು ಹಲವರ ಪ್ರಶ್ನೆ.