ಭಾಗಮಂಡಲ, ಅ. 5: ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಚೇರಂಬಾಣೆಯಲ್ಲಿ ನಡೆದಿದೆ.

ಸುಮಾರು 50 ವರ್ಷಗಳಿಗಿಂತಲೂ ಹಳೆಯದಾದ ಚೇರಂಬಾಣೆ- ಬೇಂಗೂರು ಹಾಗೂ ಬಾಡಗ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟಿದೆ. ಮೋರಿಯನ್ನು ಮುಚ್ಚಿದ ಹಿನ್ನೆಲೆ ಚರಂಡಿ ನೀರು ಹದಗೆಟ್ಟು ಗುಂಡಿಬಿದ್ದ ರಸ್ತೆಯಲ್ಲಿ ನಿಂತಿದ್ದು, ಇದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಪ್ರತಿಭಟಿಸಿದರು.

ಗ್ರಾ.ಪಂ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕುವದಾಗಿ ಪ್ರತಿಭಟನಾಕಾರರು ತಿಳಿಸಿದರು.

ರಾಜ್ಯ ಸರಕಾರದ ನಿರ್ಲಕ್ಷ್ಯ

ರಾಜ್ಯ ಸರಕಾರದಿಂದ ಪ್ರಸ್ತುತ ಯಾವದೇ ಹಣ ಬಿಡುಗಡೆಯಾಗುತ್ತಿಲ್ಲ. ಗ್ರಾ.ಪಂ. ವತಿಯಿಂದ ಡಾಮರೀಕರಣಕ್ಕೆ ಹಣವಿಲ್ಲ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯಾಗಿದೆ. ಹಣ ಬಂದಲ್ಲಿ ರಸ್ತೆ ದುರಸ್ತಿಪಡಿಸಲಾಗುವದು ಎಂದು ಗ್ರಾ.ಪಂ. ಸದಸ್ಯ ಸುಮನ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಐಯಂಡ ಸತೀಶ್, ಮಂದಪಂಡ ಮನೋಜ್ ಮಂದಣ್ಣ, ಪಟ್ಟಮಾಡ ಉದಯ್, ವಾಹನ ಮಾಲೀಕರ ಸಂಘದ ಅಧ್ಯಕ್ಷ ಬೆಳ್ಯನ ರವಿ, ಸೇರಿದಂತೆ ಇನ್ನಿತರರು ಇದ್ದರು.