ಸಿದ್ದಾಪುರ, ಅ. 4: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ವರ್ಗಾವಣೆ ಗೊಳಿಸಿರುವದನ್ನು ಖಂಡಿಸಿ ಹಾಗೂ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರು ಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಸಿ.ಪಿ.ಐ.ಎಂ ಪಕ್ಷ ಹಾಗೂ ಡಿ.ವೈ.ಎಫ್.ಐ. ಸಂಘಟನೆ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಿ.ಪಿ.ಐ.ಎಂ. ಪಕ್ಷದ ಕಾರ್ಯದರ್ಶಿ. ಪಿ.ಆರ್. ಭರತ್ ಮಾತನಾಡಿ ಸಿದ್ದಾಪುರ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ನೆಲೆಸಿದ್ದು, ಬಹುತೇಕ ಮಂದಿ ಕೂಲಿ ಕಾರ್ಮಿಕರು ಸೇರಿದಂತೆ ತೋಟ ಕಾರ್ಮಿಕರು ಇದೇ ಆರೋಗ್ಯ ಕೇಂದ್ರವನ್ನು ಅವಲಂಭಿಸಿ ಕೊಂಡಿದ್ದಾರೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಕೈಕ ವೈದ್ಯರಾದ ಡಾ. ರಾಘವೇಂದ್ರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿರುವದು ಖಂಡನೀಯ ಎಂದರು. ಆಸ್ಪತ್ರೆಗೆ ಹೆಚ್ಚಿನ ವೈದ್ಯರುಗಳನ್ನು ನೇಮಕ ಮಾಡುವಂತೆ ಆಗ್ರಹ ಪಡಿಸಿದರು.

ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಮಾತನಾಡಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಅಧಿಕವಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಡಳಿತ ಹೆಚ್ಚು ಮಂದಿ ವೈದ್ಯರುಗಳನ್ನು ನೇಮಕ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆ ಗಳಿದ್ದರೂ ಕೂಡ ಈ ಭಾಗದಿಂದ ಆಯ್ಕೆಯಾದ ಜಿ.ಪಂ ಸದಸ್ಯರು ಹಾಗೂ ತಾ.ಪಂ. ಸದಸ್ಯರುಗಳು ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು. ಇದಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಹಾಗೂ ತ್ಯಾಜ್ಯಗಳು ತುಂಬಿ ತುಳುಕುತಿದ್ದು ದುರ್ನಾತ ಬಿರುತ್ತಿದೆ. ರೋಗ ರುಜಿನಗಳು ಕಾಣಿಸಿ ಕೊಂಡಿದ್ದರೂ ಗ್ರಾ.ಪಂ. ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಟೀಕಿಸಿದರು.

ಸಿ.ಪಿ.ಐ. (ಎಂ) ಮುಖಂಡ ಹೆಚ್.ಬಿ ರಮೇಶ್ ಮಾತನಾಡಿ ಸಿದ್ದಾಪುರದ ಆರೋಗ್ಯಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ರಾಘವೇಂದ್ರ ಅವರು ಸ್ತ್ರೀತಜ್ಞರ ಕರ್ತವ್ಯವನ್ನೂ ಕೂಡ ಮಾಡುತ್ತಿದ್ದು, ಹಲವಾರು ಬಡ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿರುವದು ಖಂಡನೀಯವಾಗಿದ್ದು, ಆಸ್ಪತ್ರೆಗೆ ಹೆಚ್ಚುವರಿ ವೈದ್ಯರುಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.

ಡಿ.ವೈ.ಎಫ್.ಐ. ಸಂಚಾಲಕ ಮಹಮ್ಮದ್ ಮನ್ಸೂರ್, ಒ.ಡಿ.ಪಿ. ಮಹಿಳಾ ಘಟಕದ ಮುಖ್ಯಸ್ಥೆ ಗ್ರೇಸಿಮಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಪಿ.ಐ.ಎಂ. ಪಕ್ಷದ ಮುಖಂಡ ಡಾ. ದುರ್ಗಾಪ್ರಸಾದ್, ಬೈಜು, ಅನಿಲ್ ಕುಟ್ಟಪ್ಪ, ಮುಸ್ತಫ, ಕೃಷ್ಣ ಇನ್ನಿತರರು ಇದ್ದರು. ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರಿಗೆ ಮನವಿ ಪತ್ರ ನೀಡಿದರು.

ಮನವಿ ಪತ್ರ ಸ್ವೀಕರಿಸಿದ ಡಾ. ಯತಿರಾಜ್ ಮಾತನಾಡಿ, ವೈದ್ಯಾಧಿಕಾರಿ ರಾಘವೇಂದ್ರ ಅವರನ್ನು ಸಿದ್ದಾಪುರದಲ್ಲಿ ಮುಂದುವರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.