ಸುಂಟಿಕೊಪ್ಪ, ಅ. 4: ಭಾರತವನ್ನು ಸ್ವಚ್ಛ ಮತ್ತು ಸುಂದರ ರಾಷ್ಟ್ರವನ್ನಾಗಿ ರೂಪಿಸಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ-ಕ್ಲಬ್ ವತಿಯಿಂದ ಗಾಂಧಿ ಜಯಂತಿ ಮತ್ತು ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಏರ್ಪಾಡಿಸಿದ್ದ ಸ್ವಚ್ಛತಾ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋದಿಸಿದ ನಂತರ ಮಾತನಾಡಿದ ಇಕೋ-ಕ್ಲಬ್ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್, ‘ಸ್ವಚ್ಛತೆಯ ಮಹತ್ವ’ ಕುರಿತು ಮಾತನಾಡಿ, ಸ್ವಚ್ಛತೆಯೇ ಸೇವೆ, ದೇಶವನ್ನು ಸ್ವಚ್ಛವಾಗಿಡುವದು ನಮ್ಮೆಲ್ಲರ ಕರ್ತವ್ಯ. ನಾವು ನವಭಾರತದ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.
ಸ್ವಚ್ಛತೆ ಎಂಬದು ನಮ್ಮ ಪ್ರಭಾವ ಆಗಬೇಕು. ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿದರೆ ಇಡೀ ದೇಶವೇ ಸ್ವಚ್ಛತೆಯಾಗಲಿದೆ. ಆ ನಿಟ್ಟಿನಲ್ಲಿ ಇದು ಪ್ರತಿ ಮನೆ ಮತ್ತು ಪ್ರತಿ ಮನಸ್ಸನ್ನು ತಲುಪುವ ಮೂಲಕ ಸ್ವಚ್ಛತೆಗಾಗಿ ಜಾಗೃತಿ ಆಂದೋಲನ ನಡೆಸಬೇಕು ಎಂದು ಪ್ರೇಮ್ಕುಮಾರ್ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಎಸ್.ಕೆ. ಸೌಭಾಗ್ಯ, ವಿ.ಪಿ. ಲತಾ, ಪಿ.ಇ. ನಂದಾ ಇತರರು ಇದ್ದರು.
ಶಾಲೆಯಿಂದ ಪಟ್ಟಣದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಜಾಥಾ ನಡೆಸಿದ ವಿದ್ಯಾರ್ಥಿಗಳು ಸ್ವಚ್ಛತೆಗೆ ಸಂಬಂಧಿಸಿ ದಂತೆ ಘೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಇದಕ್ಕೂ ಮೊದಲು ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಿಸಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಪಿ. ಸೋಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲಾ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಉಪನ್ಯಾಸಕರಾದ ಫಿಲಿಪ್ ವಾಸ್, ಎಸ್.ಹೆಚ್. ಈಶ, ಮಂಜುಳ ಇತರರು ಇದ್ದರು.