ಮಡಿಕೇರಿ, ಅ. 4: ಕೊಡವ ಸಾಹಿತ್ಯ, ಕಲೆ, ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹರದಾಸ ಅಪ್ಪಚ್ಚಕವಿ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ತಿಳಿಸಿದ್ದಾರೆ.
ಇತ್ತೀಚೆಗೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ನಡೆಸಲು ಸಹಕಾರ ನೀಡಿದ ವಿವಿಧ ಸಂಘ-ಸಂಸ್ಥೆಗಳು, ಇತರ ಸಮಿತಿಯ ಸದಸ್ಯರು ಮತ್ತು ಆರ್ಥಿಕ ನೆರವು ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಲು ಆಹ್ವಾನಿಸಿದ್ದ ಸಭೆಯಲ್ಲಿ ಮಾಹಿತಿ ನೀಡಿದರು.
ಕೊಡವ ಭಾಷೆಯ ಆದಿ ಕವಿ ಎಂದೇ ಖ್ಯಾತರಾದ ಹರದಾಸ ಅಪ್ಪಚ್ಚಕವಿ ಕವಿಯ ಹುಟ್ಟೂರು ನಾಪೋಕ್ಲಿನಲ್ಲಿ ಕೊಡವ ಸಮಾಜದ ಸಹಕಾರದೊಂದಿಗೆ 150ನೇ ಜನ್ಮೋತ್ಸವ ಉದ್ಘಾಟನಾ ಸಮಾರಂಭವನ್ನು ಸೆ. 21 ರಂದು ಕವಿಯು ಹುಟ್ಟಿದ ದಿನ ನಡೆಸಲಾಗಿತ್ತು. ಈ ಕಾರ್ಯಕ್ರಮದ ಖರ್ಚುವೆಚ್ಚ ಬರಿಸಲು ನಾಪೋಕ್ಲು ಕೊಡವ ಸಮಾಜದಿಂದ ಹಲವು ಸಂಘ-ಸಂಸ್ಥೆಗಳಿಂದ ಮತ್ತು ದಾನಿಗಳಿಂದ ವಂತಿಗೆ ಸಂಗ್ರಹಿಸಿ ಕಾರ್ಯಕ್ರಮವನ್ನು ನಡೆಸಲಾಯಿತು.
ಆ ದಿನದ ಕಾರ್ಯಕ್ರಮದ ಎಲ್ಲಾ ಖರ್ಚು ವೆಚ್ಚ ಕಳೆದು ಉಳಿಕೆ ಹಣ ರೂ. ಒಂದು ಲಕ್ಷದಿಂದ ಹರದಾಸ ಅಪ್ಪಚ್ಚಕವಿ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ದತ್ತಿ ನಿಧಿ ಹಣದ ಬಡ್ಡಿ ಹಣದಲ್ಲಿ ಕೊಡವ ಸಾಹಿತ್ಯ, ಕಲೆ, ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವದಕ್ಕೆ ಪ್ರತಿ ವರ್ಷವೂ ಬಳಸಿ ಕೊಳ್ಳಲಾಗುವದು ಅಲ್ಲದೆ ಮುಂದೆಯೂ ದಾನಿಗಳು ದತ್ತಿ ನಿಧಿಗೆ ಆರ್ಥಿಕ ನೆರವು ನೀಡಬಹುದೆಂದು ರಮೇಶ್ ಚಂಗಪ್ಪ ತಿಳಿಸಿದರು.