ಮಡಿಕೇರಿ, ಅ. 4: ಕೆ. ಬಾಡಗ ಗ್ರಾಮದಲ್ಲಿ ಒಂಟಿ ಸಲಗ ಬೀಡು ಬಿಟ್ಟಿದ್ದು, ರೈತರ ಪಾಲಿಗೆ ಕಂಟಕವಾಗಿ ಕಾಡುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ಸಲಗ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿ ಮಾಡಿದೆ.

ಭತ್ತದ ಗದ್ದೆಯಲ್ಲಿ ಹೊರಳಾಡಿ, ನಡೆದಾಡಿ ಬೆಳೆಗಾರರು, ರೈತರಿಗೆ ಪ್ರತಿನಿತ್ಯ ನಷ್ಟ ಉಂಟುಮಾಡುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಹಲವು ಬಾರಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದ್ದು, ಮರುದಿನವೇ ಊರಿಗೆ ಬರುತ್ತಿದೆ. ಇದನ್ನು ಸೆರೆಹಿಡಿದು ಬಂಡೀಪುರ ಅರಣ್ಯಕ್ಕೆ ಸಾಗಿಸಬೇಕೆಂದು ಒತ್ತಾಯಿಸಿದ್ದಾರೆ.

ಫಸಲು ನಷ್ಟಕ್ಕೆ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವದರಿಂದ ಯಾವದೇ ಪ್ರಯೋಜನವಾಗುವದಿಲ್ಲ. ಆನೆಯನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ಆಗುತ್ತಿರುವ ಕಷ್ಟ- ನಷ್ಟಕ್ಕೆ ತಕ್ಷಣ ಸ್ಪಂದಿಸಬೇಕು. ಈ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ, ಎಂ.ಎಲ್.ಸಿ. ಎಂ.ಪಿ. ಸುನಿಲ್ ಸುಬ್ರಮಣಿ ಅವರ ಗಮನ ಸೆಳೆಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.