ಸಿದ್ದಾಪುರ, ಅ. 4 : ಅಂಗನವಾಡಿ ಕೇಂದ್ರವಿಲ್ಲದೆ ಸಾರ್ವಜನಿಕ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಕೆಳಭಾಗದಲ್ಲಿ ಅಂಗನವಾಡಿ ಆರಂಬಿಸಿದ ಘಟನೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯಲ್ಲಿ ಕಂಡುಬಂದಿದೆ.

ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ಅಂಗನವಾಡಿ ಕೇಂದ್ರವು ನಡೆಯುತ್ತಿದ್ದು ಇದೀಗ ಅಂಗನವಾಡಿ ಕೇಂದ್ರಕ್ಕೆ ಜಾಗವಿಲ್ಲದೆ ಗುಹ್ಯ ಗ್ರಾಮದ ಒಂದನೇ ವಾರ್ಡ್ ನಲ್ಲಿರುವ ಸಾರ್ವಜನಿಕ ಓವರ್ ಹೆಡ್ ಟ್ಯಾಂಕ್ ಕೆಳಬಾಗದಲ್ಲಿ ಸ್ಥಳೀಯ ಮಹಿಳೆಯರು ಅಂಗನವಾಡಿ ಪ್ರಾರಂಭಿಸಲು ಮುಂದಾಗಿದ್ದಾರೆ.

ಈ ಹಿಂದೆ ಅಂಗನವಾಡಿ ನಡೆಸುತ್ತಿದ್ದ ಜಾಗದಲ್ಲಿ ಶೌಚಾಲಯ ಹಾಗೂ ಮಾತೃ ಪೂರ್ಣ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ಆಹಾರ ತಯಾರಿಸಲು ಜಾಗದ ಕೊರತೆಯಿದ್ದು ಅಲ್ಲದೆ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ಮುಚ್ಚಲಾಗಿದೆ. ಬದಲಿ ವ್ಯವಸ್ಥೆ ಇಲ್ಲದೆ ಪೋಷಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದಿನಂಪ್ರತಿ ಹತ್ತಾರು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಆಗಮಿಸುತ್ತಿದ್ದು, ಸೂಕ್ತ ಕಟ್ಟಡವಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು ಸಾರ್ವಜನಿಕ ಓವರ್ ಹೆಡ್ ಟ್ಯಾಂಕ್‍ನ ಕೆಳಭಾಗದಲ್ಲಿದ್ದ ಗಿಡ ಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿ ಅಂಗನವಾಡಿ ಕೇಂದ್ರವನ್ನು ಆರಂಭಿಸಿದ್ದಾರೆ. ಹೈಸ್ಕೂಲ್ ಪೈಸಾರಿ ಭಾಗದಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಲು ಇಲಾಖೆಯು ಕೂಡಲೇ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಮುಂದಿನ ದೇಶದ ಭವಿಷ್ಯವನ್ನು ರೂಪಿಸಬೇಕಾದ ಪುಟ್ಟ ಮಕ್ಕಳು ಓವರ್ ಹೆಡ್ ಟ್ಯಾಂಕ್‍ನ ಕೆಳಭಾಗದಲ್ಲಿ ಕುಳಿತು ಕಲಿಯ ಬೇಕಾದ ದುಸ್ಥಿತಿ ಒದಗಿಬಂದಿರುವದು ನಿಜಕ್ಕೂ ವಿಪರ್ಯಾಸ.