ಸೋಮವಾರಪೇಟೆ,ಅ.5: ಕೊಡಗಿನ ಕುಲದೇವತೆ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ದಿನದಂದು ಕೊಡಗು ಜಿಲ್ಲೆಯಾದ್ಯಂತ ತಲಕಾವೇರಿಗೆ ತೆರಳಲು ಅನುಕೂಲವಾಗುವಂತೆ ವಿಶೇಷ ರಿಯಾಯಿತಿ ದರದಲ್ಲಿ ಬಸ್‍ಗಳನ್ನು ಒದಗಿಸಬೇಕೆಂದು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾವೇರಿ ಮಾತೆ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರದೇ ಕೊಡಗಿನ ಜನರ ಆರಾಧ್ಯ ದೇವತೆಯಾಗಿದೆ. ತೀರ್ಥೋದ್ಭವ ದಿನದಂದು ತಲಕಾವೇರಿಗೆ ತೆರಳಲು ಎಲ್ಲಾ ತಾಲೂಕು ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ವಿಶೇಷ ಬಸ್‍ಗಳನ್ನು ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೋಮವಾರಪೇಟೆಯ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಮೂಲಕ ಈ ಭಾಗದ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸುವ ಕಾರ್ಯ ನಡೆಯುತ್ತಿದ್ದು, ತಾ. 17ರಂದು ತಲಕಾವೇರಿಯಿಂದ ತೀರ್ಥ ತಂದು ತಾ.18ರಂದು ಇಲ್ಲಿನ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ವಿತರಿಸಲಾಗುವದು. ತಾ. 19ರಂದು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಜೆ 6 ಗಂಟೆಗೆ ಹುಣಸೂರಿನ ಬೋಜ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗುವದು ಎಂದು ನಾಗರಾಜ್ ತಿಳಿಸಿದರು.

ಪ್ರಸಕ್ತ ವರ್ಷ ತಲಕಾವೇರಿಯಿಂದ ತೀರ್ಥ ತಂದು ಇತರೆಡೆ ವಿತರಿಸುವ ಕ್ರಮಕ್ಕೆ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ವಿರೋಧಿಸುತ್ತಿದ್ದು, ಈ ಕ್ರಮವನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ತಲಕಾವೇರಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಇಂತಹ ಕ್ರಮವನ್ನು ಕೈಗೊಳ್ಳುವದು ಶ್ಲಾಘನೀಯ. ತೀರ್ಥ ವಿತರಣೆಗೆ ಅವಕಾಶ ನೀಡದಿದ್ದರೆ, ಇಲ್ಲಿನ ಕಾವೇರಿ ಪ್ರತಿಮೆಗೆ ಆ ದಿನದಂದು ಪೂಜೆ ಸಲ್ಲಿಸಲಾಗುವದು ಎಂದು ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹೆಚ್.ಓ. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಮೂರ್ತಿ ಪ್ರಸಾದ್, ಪದಾಧಿಕಾರಿಗಳಾದ ಚನ್ನಯ್ಯ, ಎನ್.ಎನ್. ಉದಯಕುಮಾರ್, ಎನ್. ನಾಗರಾಜ್ ಅವರುಗಳು ಉಪಸ್ಥಿತರಿದ್ದರು.