ಮಡಿಕೇರಿ, ಅ. 5: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾ.ಪಂ. ಎರಡನೇ ಬಾರಿಗೆ ರಾಜ್ಯ ಸರಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಉತ್ತಮ ಆಡಳಿತ, ಪರಿಶಿಷ್ಟ ವರ್ಗ ಹಾಗೂ ಪಂಗಡದವರು ಮತ್ತು ಅಂಗವಿಕಲರಿಗಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿರುವದು, ಸಂಪನ್ಮೂಲ ಕ್ರೋಢೀಕರಣ ಹಾಗೂ ತೆರಿಗೆ ವಸೂಲಾತಿಯಲ್ಲಿ ಪೂರ್ಣ ಸಾಧನೆ, ಸರಕಾರದ ಯೋಜನೆಗಳ ಯಶಸ್ವಿ ಜಾರಿ ಹಾಗೂ ಗ್ರಾಮ ಸಭೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿರುವದು, ವಸತಿ ಯೋಜನೆಯಡಿ 76 ಮಂದಿ ಬಡವರ್ಗದವರಿಗೆ ವಸತಿ ಕಲ್ಪಿಸಿರುವದು, ಸ್ವಚ್ಛತೆ ಕಾಪಾಡುವದರೊಂದಿಗೆ ಅರಿವು ಮೂಡಿಸುವದು ಸೇರಿದಂತೆ ಮುಖ್ಯವಾಗಿ ಗ್ರಾಮಸ್ಥರಿಗೆ ಬಹುತೇಕ ನೈಸರ್ಗಿಕ ಕುಡಿಯುವ ನೀರಿನ ಯೋಜನೆ ರೂಪಿಸುವದರೊಂದಿಗೆ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಿರುವ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಗಾಳಿಬೀಡು, ಕಾಲೂರು, ಹಮ್ಮಿಯಾಲ, ಮುಟ್ಲು, ಎರಡನೇ ಮೊಣ್ಣಂಗೇರಿ, ಕಡಮಕಲ್ಲು ಸೇರಿದಂತೆ ಒಟ್ಟು 10 ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 3804 ಜನಸಂಖ್ಯೆ ಹೊಂದಿದೆ.
ತಾ. 2 ರಂದು ಗಾಂಧಿ ಜಯಂತಿ ಆಚರಣೆಯಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರಿಂದ ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಶ್ ಸೋಮಯ್ಯ ಹಾಗೂ ಅಭಿವೃದ್ಧಿ ಅಧಿಕಾರಿ ಶಶಿಕಿರಣ ಅವರುಗಳು ಪ್ರಶಸ್ತಿ ಸ್ವೀಕಾರ ಮಾಡಿದರು.
ಪಂಚಾಯಿತಿ ಆಡಳಿತ ಮಂಡಳಿ, ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿ ಲಭ್ಯವಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಶಶಿಕಿರಣ ಹೇಳಿದ್ದಾರೆ.